ತಮಿಳುನಾಡು ಮೂಲದ ಇಳವರಸಿ ಜಯಕಾಂತ್ ಜೀವನ ಪಥದಲ್ಲಿ ಬಂದ ಏಳುಬೀಳಿನ ಹಾದಿಗಳನ್ನು ಮೆಟ್ಟಿ ನಿಲ್ಲುವುದು ಹೇಗೆ ಎಂಬುದಕ್ಕೆ ಜ್ವಲಂತ ನಿದರ್ಶನವಾಗಿ ನಿಂತಿದ್ದಾರೆ.
ಕೇರಳದ ತ್ರಿಶ್ಶೂರು ಜಿಲ್ಲೆಯಲ್ಲಿ ಕಳೆದ 45 ವರ್ಷಗಳಿಂದ ಜೀವಿಸುತ್ತಿರುವ ಇಳವರಸಿ ಕುಟುಂಬ ಜೀವನಾಧಾರಕ್ಕೆಂದು ಕುರುಕಲು ಹಾಗೂ ಸಿಹಿ ತಿಂಡಿಗಳನ್ನು ಮಾಡಿಕೊಂಡು ಹೋಗುತ್ತಿತ್ತು. ಬಾಲ್ಯದಿಂದಲೇ ತನ್ನ ಹೆತ್ತವರು ಹಾಗೂ ಅಜ್ಜ-ಅಜ್ಜಿ ನಡೆಸಿಕೊಂಡು ಬರುತ್ತಿದ್ದ ಕಸುಬನ್ನು ನೋಡಿ ಕಲಿತ ಇಳವರಸಿ, ದೊಡ್ಡವರಾಗಿ ವಿವಾಹವಾದ ಬಳಿಕವೂ ಸಹ ಇದನ್ನೇ ವೃತ್ತಿಯನ್ನಾಗಿ ಮುಂದುವರೆಸಿದರು.
ಅವರ ಅಂಗಡಿಯಲ್ಲಿ ದೊರಕುವ ಉತ್ಪನ್ನಗಳನ್ನು ಬಹಳ ಮೆಚ್ಚಿಕೊಂಡಿದ್ದ ಆಕೆಯ ಗ್ರಾಹಕರು ದೊಡ್ಡ ಪ್ರಮಾಣದಲ್ಲಿ ಆರ್ಡರ್‌ಗಳನ್ನು ಕೊಡಲು ಆರಂಭಿಸಿದ್ದರು.
ಉದ್ಯಮಿಯಾಗುವ ಆಸೆ ಹೊಂದಿದ್ದ ಇಳವರಸಿ, ಆಕೆಯ ಪತಿ ಹಾಗೂ ಮಕ್ಕಳೊಂದಿಗೆ ಸೇರಿಕೊಂಡು ತಮ್ಮ ಉಳಿತಾಯದ ಹಣದ ಜೊತೆಗೆ ಬ್ಯಾಂಕಿನಿಂದ 50 ಲಕ್ಷ ರೂ.ಗಳ ಸಾಲವನ್ನೂ ಪಡೆದು, 2010ರಲ್ಲಿ ತ್ರಿಶ್ಶುರಿನಲ್ಲಿ ಸೂಪರ್ ಮಾರ್ಕೆಟ್ ಆರಂಭಿಸಿದ್ದರು. ಮಾವಿನಹಣ್ಣು, ಕಿತ್ತಳೆ, ಬೆಟ್ಟದ ನೆಲ್ಲಿಕಾಯಿ, ಆಲೂಗೆಡ್ಡೆ ಸೇರಿದಂತೆ ಅನೇಕ ಹಣ್ಣು-ತರಕಾರಿಗಳ ಉತ್ಪನ್ನಗಳನ್ನು ಇಳವರಸಿ ಮಾರಾಟ ಮಾಡುತ್ತಿದ್ದರು. ಇದೇ ವೇಳೆ ಅವರು 50 ಮಂದಿಗೆ ಉದ್ಯೋಗ ನೀಡಲೂ ಸಹ ಶಕ್ತರಾಗಿದ್ದರು.
ಆದರೆ ತಮ್ಮ ಅಂಗಡಿಯಲ್ಲಿ ಘಟಿಸಿದ ಕಳ್ಳತನವೊಂದರಿಂದ ಇಳವರಸಿ ಎಲ್ಲವನ್ನೂ ಕಳೆದುಕೊಂಡುಬಿಟ್ಟಿದ್ದರು. ಘಟನೆಯಿಂದ ಶಾಕ್ ಆಗಿದ್ದ ಇಳವರಸಿ ತಿಂಗಳುಗಳ ಮಟ್ಟಿಗೆ ಆಸ್ಪತ್ರೆ ಸೇರಿಕೊಂಡು ಚೇತರಿಸಿಕೊಂಡಿದ್ದರು. ನಿಧಾನವಾಗಿ ತಮ್ಮ ಮಾನಸಿಕ ಹಾಗೂ ದೈಹಿಕ ಶಕ್ತಿಯನ್ನು ಮತ್ತೆ ತಂದುಕೊಂಡ ಇಳವರಸಿ ಕಳೆದುಕೊಂಡಿದ್ದೆಲ್ಲವನ್ನೂ ಮತ್ತೆ ಗಳಿಸಲು ಮುಂದಾಗಿದ್ದಾರೆ.
ತ್ರಿಶ್ಶೂರಿನ ರೈಲ್ವೇ ನಿಲ್ದಾಣದಲ್ಲಿ ಪುಟ್ಟದೊಂದು ಚಿಪ್ಸ್ ಸ್ಟಾಲ್ ಹಾಕಿಕೊಂಡ ಇಳವರಸಿ, ಕುಟುಂಬದಿಂದ ಬಳಿವಳಿಯಾಗಿ ಬಂದ ಕೌಶಲ್ಯವನ್ನು ಬಳಸಿಕೊಂಡು ಮತ್ತೆ ತಮ್ಮ ಉದ್ಯಮ ಸಾಮ್ರಾಜ್ಯವನ್ನು ಮರಳಿ ಸ್ಥಾಪಿಸಿದ್ದಾರೆ. ತ್ರಿಶ್ಶೂರಿನಲ್ಲಿ ಇನ್ನೂ ನಾಲ್ಕು ಸ್ಟಾಲ್‌ಗಳನ್ನು ತೆರೆದ ಇಳವರಸಿ, ಸದ್ಯಕ್ಕೆ ಸಿಹಿ, ಕುರುಕಲು, ಕೇಕ್ ಹಾಗೂ ಉಪ್ಪಿನಕಾಯಿ ಸೇರಿದಂತೆ 60ಕ್ಕೂ ಹೆಚ್ಚು ಉತ್ಪನ್ನಗಳ ಮಾರಾಟ ಮಾಡುತ್ತಿದ್ದಾರೆ. ಇಳವರಸಿಯ ಸಾಧನೆಗೆ ಯುಎಇಯ ಅಂತಾರಾಷ್ಟ್ರೀಯ ಪೀಸ್ ಕೌನ್ಸಿಲ್‌ನ ’ಶ್ರೇಷ್ಠ ಉದ್ಯಮಿ’ ಪುರಸ್ಕಾರ ಸಂದಿದೆ.