ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಕಾವುನಲ್ಲಿ ರಾಜ್ಯದ ಮೊದಲ ಚಾಕೊಲೇಟ್ ಪಾರ್ಕ್ ಆರಂಭವಾಗಲಿದ್ದು, ಏಪ್ರಿಲ್ ನಲ್ಲಿ ಇದರ ಉದ್ಘಾಟನೆಯಾಗಲಿದೆ ಎಂದು ತಿಳಿದುಬಂದಿದೆ. ಮಾಣಿ ಮೈಸೂರು ಹೆದ್ದಾರಿ ಪಕ್ಕದಲ್ಲೇ ಈ ಚಾಕೊಲೇಟ್ ಪಾರ್ಕ್ ಆರಂಭವಾಗುತ್ತಿದ್ದು, ಪ್ರವಾಸಿಗರನ್ನು ಸೆಳೆಯಲಿದೆ ಎಂದು ಹೇಳಲಾಗಿದೆ.
ಕ್ಯಾಂಪ್ಕೋ ಸಂಸ್ಥೆಗೆ ಸೇರಿದ 12 ಎಕರೆ ಜಾಗದ ಪೈಕಿ ಒಂದೂವರೆ ಎಕರೆ ಜಾಗದಲ್ಲಿ ಚಾಕೊಲೇಟ್ ಪಾರ್ಕ್ ತಲೆಯೆತ್ತಲಿದ್ದು, ಇದರಲ್ಲಿ ಚಾಕಲೇಟ್ ತಯಾರಾಗುವ ಪ್ರಕ್ರಿಯೆಯನ್ನು ನೋಡುವುದರ ಜೊತೆಗೆ ತಮಗಿಷ್ಟವಾದ ಚಾಕೊಲೇಟ್ ನ್ನು ಸಹ ಗ್ರಾಹಕರು ಖರೀದಿಸಬಹುದಾಗಿದೆ.
ಜೊತೆಗೆ ಇಲ್ಲಿ ರೆಸ್ಟೋರೆಂಟ್, ವಾಶ್ ರೂಮ್, ಮಕ್ಕಳನ್ನು ಆಕರ್ಷಿಸುವ ಸಲುವಾಗಿ ಚಿಲ್ಡ್ರನ್ಸ್ ಪ್ಲೇ ಏರಿಯಾ, ಕೃತಕ ವಾಟರ್ ಫಾಲ್ಸ್ ಮೊದಲಾದವುಗಳನ್ನು ಆರಂಭಿಸಲಾಗುತ್ತಿದ್ದು ಇವುಗಳಿಂದ ಪ್ರವಾಸಿಗರು ಆಕರ್ಷಿತರಾಗುತ್ತಾರೆ ಎಂದು ಅಭಿಪ್ರಾಯಪಡಲಾಗಿದೆ. ಜೊತೆಗೆ ಪ್ರವಾಸಿಗರು ಕೆಲವೊತ್ತು ವಾಯು ವಿಹಾರವನ್ನೂ ಮಾಡಬಹುದಾಗಿದೆ.