ಬೆಂಗಳೂರು: ಬಿಕಿನಿ ಮೇಲೆ ಕನ್ನಡ ಬಾವುಟದ ಬಣ್ಣ ಮತ್ತು ರಾಜ್ಯ ಲಾಂಛನವನ್ನು ಬಳಸಿದ್ದ ಅಮೆಜಾನ್ ಕೆನಡಾ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.
ಕನ್ನಡ ಬಾವುಟದ ಬಣ್ಣ ಬಳಸಿದ ಮತ್ತು ರಾಜ್ಯ ಲಾಂಛನ ಬಳಸಿದ ಕಾರಣಕ್ಕೆ ಇ – ಕಾಮರ್ಸ್ ದೈತ್ಯ ಕಂಪನಿ ಅಮೆಜಾನ್ ಗೆ ನೋಟಿಸ್ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಅವರು, ಅಮೆಜಾನ್ ಉತ್ಪನ್ನವನ್ನು ಮಾರುಕಟ್ಟೆ ಮಾಡುವ ಉದ್ದೇಶದಿಂದ ರಾಜ್ಯ ಲಾಂಛನ ಬಳಸಿಕೊಂಡಿರುವುದು ಸರಿಯಾದ ಕ್ರಮವಲ್ಲ. ಅಮೆಜಾನ್ ವಿರುದ್ಧ ಕ್ರಮ ಕೈಗೊಳ್ಳಲು ಈಗಾಗಲೇ ಮುಖ್ಯಕಾರ್ಯದರ್ಶಿ ಪಿ. ರವಿ ಕುಮಾರ್ ಮತ್ತು ಡಿಪಿಎಆರ್ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕಂಪನಿಯು ಈ ವಿಷಯದ ಬಗ್ಗೆ ಸಮರ್ಥನೆ ನೀಡಲು ಮುಂದಾಗಿಲ್ಲ. ಇದು ಬೇಜವಾಬ್ದಾರಿತನವಾಗಿದೆ. ಶೀಘ್ರವೇ ಲೀಗಲ್ ನೋಟಿಸ್ ನೀಡಲಾಗುವುದು. ಅಮೆಜಾನ್ ಕಂಪನಿ ಉತ್ಪನ್ನ ಹಿಂಪಡೆಯದಿದ್ದರೆ ಸಮಸ್ಯೆಯನ್ನು ಸರಿಪಡಿಸದಿದ್ದರೆ ಅವರ ಪರವಾನಿಗಿ ರದ್ದುಗೊಳಿಸುವಂತೆ ಸಂಬಂಧಿತ ಇಲಾಖೆಗಳಿಗೆ ಶಿಫಾರಸು ಮಾಡುವುದಾಗಿ ಸಚಿವರು ತಿಳಿಸಿದ್ದಾರೆ.
ಇನ್ನು ಕನ್ನಡವನ್ನು ಕೊಳಕು ಭಾಷೆ ಎಂದು ಹೇಳಿದ್ದ ಗೂಗಲ್ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದಿರಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಖಂಡನೆ ವ್ಯಕ್ತಪಡಿಸಲಾಗಿದೆ. ಈ ವಿಷಯದಲ್ಲಿ ಗೂಗಲ್ ಸ್ವಯಂಪ್ರೇರಣೆಯಿಂದ ಕ್ಷಮೆಯಾಚಿಸಲು ಮುಂದೆ ಬಂದ ಹಿನ್ನೆಲೆಯಲ್ಲಿ ಇಂತಹ ತೀರ್ಮಾನ ಕೈಗೊಳ್ಳಲಾಗಿದೆ. ಖಂಡನಾ ಪತ್ರವನ್ನು ಕಳುಹಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.