ಮುಂಬೈ: ರಿಲಯನ್ಸ್ ಸಮೂಹದ ಇ- ಕಾಮರ್ಸ್ ಪ್ಲಾಟ್ ಫಾರ್ಮ್ ಜಿಯೋ ಮಾರ್ಟ್ ಬೃಹತ್ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದೆ.
1000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲಾಗಿದ್ದು, ಮುಂದಿನ ತಿಂಗಳುಗಳಲ್ಲಿ 9 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇತ್ತೀಚೆಗಷ್ಟೇ ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ ಕಂಪನಿ ಸ್ವಾಧೀನಪಡಿಸಿಕೊಂಡಿದ್ದ ಜಿಯೋ ಮಾರ್ಟ್ ಉದ್ಯೋಗ ಕಡಿತ ನಿರ್ಧಾರ ಕೈಗೊಂಡಿದೆ. ಹಲವು ಕೇಂದ್ರಗಳನ್ನು ಮುಚ್ಚಲು ಮುಂದಾಗಿದೆ. ಜಿಯೋ ಮಾರ್ಟ್ ನಲ್ಲಿ 15 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಕೆಲಸ ಮಾಡುತ್ತಿದ್ದು, ಇದರಲ್ಲಿ ಕನಿಷ್ಠ ಮೂರನೇ ಎರಡರಷ್ಟು ಉದ್ಯೋಗಿಗಳ ಸಂಖ್ಯೆ ಕಡಿತವಾಗಲಿದೆ.
ಖರ್ಚು ಸರಿದೂಗಿಸಿ ಲಾಭ ಹೆಚ್ಚಿಸಲು ಉದ್ಯೋಗ ಕಡಿತ ಸೇರಿದಂತೆ ವಿವಿಧ ಕ್ರಮ ಕೈಗೊಳ್ಳಲಾಗಿದೆ. ವೆಚ್ಚಗಳಿಗೆ ಕಡಿವಾಣ ಹಾಕಲು ಉದ್ಯೋಗಿಗಳ ನಿಗದಿತ ವೇತನ ಕಡಿತಗೊಳಿಸಲು ನಿರ್ಧರಿಸಲಾಗಿದೆ. ಕಂಪನಿಯು ಲಾಭ ಪ್ರಮಾಣ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ನಷ್ಟ ಕಡಿಮೆ ಮಾಡಲು ಕಂಪನಿ ಅರ್ಧಕ್ಕಿಂತ ಹೆಚ್ಚು ಕೇಂದ್ರಗಳನ್ನು ಮುಚ್ಚಲು ನಿರ್ಧರಿಸಿದೆ.
ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ ಇಂಡಿಯಾವನ್ನು ರಿಲಯನ್ಸ್ ಖರೀದಿಸಿದ್ದರಿಂದ ಹೆಚ್ಚುವರಿಯಾಗಿ 3500 ಉದ್ಯೋಗಿಗಳಿದ್ದು, ಉದ್ಯೋಗ ಕಡಿತ ಅನಿವಾರ್ಯವೆಂದು ಹೇಳಲಾಗಿದೆ.