ಧೈರ್ಯ ಹಾಗೂ ಸಾಹಸಗಾಥೆಗಳಿಂದ ಹೆಸರಾದ ಝಾನ್ಸಿ ಇನ್ನು ಮುಂದೆ ಸ್ಟ್ರಾಬೆರ‍್ರಿ ಕೃಷಿಯ ಮೂಲಕ ಹೊಸ ಅಧ್ಯಾಯಕ್ಕೆ ಕಾಲಿಡಲು ಸಜ್ಜಾಗುತ್ತಿದೆ.
ಸ್ಟ್ರಾಬೆರ‍್ರಿ ಬೆಳೆಯಲು ಅತ್ಯಂತ ಸೂಕ್ತವಾದ ವಾತಾವರಣವಿದೆ ಎನ್ನಲಾಗುತ್ತಿರುವ ಝಾನ್ಸಿಯಲ್ಲಿ ಜನವರಿ 17ರಿಂದ ಫೆಬ್ರವರಿ 16ರವರೆಗೆ ಸ್ಟ್ರಾಬೆರ‍್ರಿ ಉತ್ಸವ ಆಯೋಜಿಸಲಾಗಿದೆ.
ದವಸಗಳು, ಎಣ್ಣೆ ಕಾಳುಗಳು ಹಾಗೂ ಶುಂಠಿಗೆ ಹೆಸರಾದ ಝಾನ್ಸಿಯಲ್ಲಿ ಹಣ್ಣುಗಳ ಉತ್ಪಾದನೆಗೆ ಮುನ್ನುಡಿ ಬರೆಯಲಿರುವ ಈ ಉತ್ಸವಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚಾಲನೆ ಕೊಟ್ಟಿದ್ದಾರೆ. ಈ ಮೂಲಕ ಬುಂದೇಲ್‌ಖಾಂಡ್ ಪ್ರದೇಶದಲ್ಲಿ ಹಣ್ಣುಗಳ ಕೃಷಿಗೆ ಉತ್ತೇಜನ ಕೊಡಲು ಉ.ಪ್ರ. ಸರ್ಕಾರ ಮುಂದಾಗಿದೆ.
ಝಾನ್ಸಿಯ ಎರಡು ಕುಟುಂಬಗಳು ಹನಿ ನೀರಾವರಿ ಹಾಗೂ ವೈಜ್ಞಾನಿಕ ಕ್ರಮಗಳ ಮೂಲಕ ಈ ಪ್ರದೇಶದಲ್ಲೂ ಸಹ ಸ್ಟ್ರಾಬೆರ‍್ರಿಗಳನ್ನು ಬೆಳೆಯಬಹುದು ಎಂದು ತೋರಿಸಿಕೊಟ್ಟ ಬಳಿಕ ಈ ಪ್ರದೇಶದಲ್ಲಿ ಹೊಸ ಶಕೆ ಆರಂಭವಾಗುವ ಸಾಧ್ಯತೆ ಇದೆ.
ಮುಂದಿನ ದಿನಗಳಲ್ಲಿ ಸ್ಟ್ರಾಬೆರ‍್ರಿ ಕೃಷಿಯ ಬಗ್ಗೆ ವರ್ಕ್‌ಶಾಪ್‌ಗಳನ್ನು ಆಯೋಜನೆ ಮಾಡುವ ಮೂಲಕ ಕೃಷಿಕರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಅರಿವು ಮೂಡಿಸಲಾಗುವುದು ಎಂದು ಝಾನ್ಸಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.