ಲಾಕ್ ಡೌನ್ ಸಡಿಲಿಕೆ ಬಳಿಕ ಚಿನ್ನದ ಬೆಲೆ ದಾಖಲೆಯ ಮಟ್ಟ ತಲುಪಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಶುದ್ದ ಚಿನ್ನದ ಬೆಲೆ 57 ಸಾವಿರ ರೂ. ಸನಿಹ ಮುಟ್ಟಿದೆ. ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಈ ಬೆಳವಣಿಗೆ ಖುಷಿ ತಂದರೆ ಖರೀದಿದಾರರಿಗೆ ಕಹಿಯಾಗಿದೆ.
ಬೆಲೆ ಏರಿಕೆಯ ಮಧ್ಯೆಯೂ ಶುಭ ಸಮಾರಂಭಗಳಿಗೆ ಚಿನ್ನ ಖರೀದಿಸುವ ಅನಿವಾರ್ಯತೆಯಿರುವವರು ತಮಗೆ ಸೂಕ್ತವೆನಿಸುವ ಅಂಗಡಿಗೆ ಹೋಗಿ ಚಿನ್ನ ಖರೀದಿ ಮಾಡಿ ಹಣ ನೀಡಿ ಬರುತ್ತಾರೆ. ಆದ್ರೆ ಎಂದೂ ಬೆಲೆ ಬಗ್ಗೆ ಮರು ಪ್ರಶ್ನೆ ಮಾಡುವುದಿಲ್ಲ.
ಚಿನ್ನ ಖರೀದಿ ಮಾಡುವ ಮೊದಲು ಬೆಲೆ, ಏರಿಳಿತ, ಮೇಕಿಂಗ್ ಚಾರ್ಜ್, ಜಿ.ಎಸ್.ಟಿ. ಸೇರಿದಂತೆ ಎಲ್ಲ ವಿಷ್ಯಗಳ ಬಗ್ಗೆ ತಿಳಿದಿರಬೇಕು. ದೇಶದಲ್ಲಿ ಯಾವುದೆ ಔಪಚಾರಿಕ ವಿನಿಮಯ ಕೇಂದ್ರದಿಂದ ಚಿನ್ನದ ಬೆಲೆಯನ್ನು ನಿರ್ಧರಿಸಲಾಗುವುದಿಲ್ಲ. ರಾಷ್ಟ್ರದ ಎಲ್ಲ ಕಡೆ ಒಂದೇ ಬೆಲೆ ನಿಗದಿಪಡಿಸುವ ಏಕೈಕ ಅಧಿಕಾರ ಯಾರಿಗೂ ಇಲ್ಲ. ಇದೇ ಕಾರಣಕ್ಕೆ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಸಾಕಷ್ಟು ಏರಿಳಿತ ಕಾಣಬಹುದು.
ಭಾರತದ ಪ್ರತಿ ನಗರದಲ್ಲೊಂದೇ ಅಲ್ಲ ಪ್ರತಿ ಅಂಗಡಿಯಲ್ಲೂ ಚಿನ್ನ, ಬೆಳ್ಳಿ ಬೆಲೆಯಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಪ್ರತಿ ದಿನ ಬೆಳಿಗ್ಗೆ ನಗರದ ಜ್ಯುವೆಲರಿ ಅಸೋಸಿಯೇಷನ್ ಚಿನ್ನದ ಬೆಲೆಯ ಘೋಷಣೆ ಮಾಡುತ್ತದೆ. ಇದ್ರ ಆಧಾರದ ಮೇಲೆ ಆಯಾ ನಗರದ ಅಂಗಡಿ ಮಾಲೀಕರು ಚಿನ್ನದ ಬೆಲೆ ನಿಗದಿಪಡಿಸಿಕೊಳ್ಳುತ್ತಾರೆ.
ಚಿನ್ನದ ಅಂಗಡಿ ಮಾಲೀಕರು ಬೆಲೆ (22ಕೆಟಿ ಅಥವಾ 18 ಕೆಟಿ) ಬಂಗಾರದ ತೂಕ ಪ್ಲಸ್ ಮೇಕಿಂಗ್ ಚಾರ್ಜ್, ಶೇಕಡಾ 3 ರಷ್ಟು ಜಿ.ಎಸ್.ಟಿ. ( ಆಭರಣದ ಬೆಲೆ +ಮೇಕಿಂಗ್ ಚಾರ್ಜ್) ಈವೆಲ್ಲವನ್ನೂ ಲೆಕ್ಕ ಮಾಡಿ ಆಭರಣದ ಅಂತಿಮ ಬೆಲೆ ನಿಗದಿ ಮಾಡುತ್ತಾರೆ.