ವಾಷಿಂಗ್ಟನ್: ವಾರದಲ್ಲಿ ಮೂರೂವರೆ ದಿನ ಕೆಲಸ, ಮೂರೂವರೆ ದಿನ ರಜೆ ನೀಡುವ ಪದ್ಧತಿ ಜಾರಿಗೆ ಬರುವ ಸಾಧ್ಯತೆಗಳಿವೆ. ಪ್ರಸ್ತುತ ಬಹುತೇಕ ಕಡೆಗಳಲ್ಲಿ ವಾರಕ್ಕೆ ಒಂದು ದಿನ ರಜೆ ನೀಡುವ ಪದ್ಧತಿ ಇದೆ. ಐಟಿ ಕಾರ್ಪೊರೇಟ್ ವಲಯದಲ್ಲಿ ನೌಕರರಿಗೆ ವಾರಕ್ಕೆ ಎರಡು ದಿನ ರಜೆ ನೀಡಲಾಗುತ್ತಿದೆ. ಮುಂದಿನ ಪೀಳಿಗೆಯ ಉದ್ಯೋಗಿಗಳಿಗೆ ಕೆಲಸದ ದಿನ ಕಡಿತವಾಗಲಿದ್ದು, ವಾರಕ್ಕೆ ಮೂರೂವರೆ ದಿನ ಮಾತ್ರ ಕೆಲಸದ ಪದ್ಧತಿ ಜಾರಿಗೆ ಬರುವ ಸಾಧ್ಯತೆ ಇದೆ.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಪರಿಣಾಮದಿಂದ ಕೆಲಸದ ಅವಧಿ ಉಳಿತಾಯವಾಗಲಿದ್ದು, 3.5 ದಿನಗಳ ಕೆಲಸದ ವಾರ ಜಾರಿಗೆ ಬರುವ ಸಂಭವ ಇದೆ ಎಂದು ಜೆಪಿ ಮೋರ್ಗಾಸ್ ಚೇಸ್ ಅಂಡ್ ಕೋ ಸಂಸ್ಥೆಯ ಸಿಇಒ ಜೆಮಿ ಡೈಮನ್ ಅಭಿಪ್ರಾಯಪಟ್ಟಿದ್ದಾರೆ.
ಭವಿಷ್ಯದ ಉದ್ಯೋಗಗಳ ಕುರಿತಾಗಿ ಮಾತನಾಡಿದ ಅವರು, ನಮ್ಮ ಮಕ್ಕಳು ವಾರದಲ್ಲಿ ಮೂರೂವರೆ ದಿನವಷ್ಟೇ ಕೆಲಸ ಮಾಡುವಂತಹ ಕಾಲ ಬರುತ್ತದೆ. ಕೃತಕ ಬುದ್ಧಿಮತ್ತೆ ಪರಿಣಾಮ ನಮ್ಮ ಕೆಲಸ ಮಾಡುವ ಪದ್ಧತಿ ಬದಲಾಗಲಿದೆ. ಕೆಲಸದ ಅವಧಿ ಗಣನೀಯವಾಗಿ ಕಡಿಮೆಯಾಗಲಿದ್ದು, ಕೆಲವು ಉದ್ಯೋಗಗಳೇ ಇಲ್ಲವಾಗುತ್ತವೆ ಎಂದು ಹೇಳಿದ್ದಾರೆ.
ವಾಣಿಜ್ಯ, ಟ್ರೇಡಿಂಗ್, ಡೇಟಾ, ಸಂಶೋಧನೆ ಪ್ರತಿಯೊಂದು ಅಪ್ಲಿಕೇಷನ್ ಸೇರಿದಂತೆ ಎಲ್ಲದಕ್ಕೂ ಆರ್ಟಿಫಿಶಿಯಲ್ ತಂತ್ರಜ್ಞಾನ ಅನ್ವಯಿಸಿದರೆ ಮನುಷ್ಯ ಕೇಂದ್ರಿತ ಉದ್ಯೋಗಗಳೇ ಇಲ್ಲವಾಗಬಹುದು ಎಂದು ಹೇಳಿದ್ದಾರೆ.
ಈಗಾಗಲೇ ಐದು ದಿನದ ಕೆಲಸದ ಅವಧಿ ಕಾರ್ಪೊರೇಟ್ ಕಂಪನಿಗಳಲ್ಲಿ ಜಾರಿಯಲ್ಲಿದ್ದು, ಕೆಲಸದ ಅವಧಿಯನ್ನು 4 ದಿನಕ್ಕೆ ಕಡಿತಗೊಳಿಸುವ ಪ್ರಯೋಗಗಳು ಜಪಾನ್, ಬ್ರಿಟನ್ ಸೇರಿದಂತೆ ಕೆಲವು ದೇಶಗಳಲ್ಲಿ ಆರಂಭವಾಗಿವೆ.