ವಿಜಯವಾಡ: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮತ್ತೊಂದು ಹೊಸ ಯೋಜನೆ ಜಾರಿಗೆ ತಂದಿದ್ದಾರೆ. ವೈ.ಎಸ್.ಆರ್. ಕಾಂಗ್ರೆಸ್ ಆಡಳಿತದ ಆಂಧ್ರಪ್ರದೇಶ ಸರ್ಕಾರ ಜಗನ್ನಣ್ಣ ತೋಡು ಹೆಸರಿನ ಯೋಜನೆಯನ್ನು ಜಾರಿಗೆ ತರಲಾಗಿದೆ.
ತರಕಾರಿ ವ್ಯಾಪಾರಿಗಳು, ಸಣ್ಣ ಕಿರಾಣಿ ಅಂಗಡಿ ಹೊಂದವರು, ಕ್ಯಾಂಟೀನ್ ನಡೆಸುತ್ತಿರುವವರಿಗೆ, ಬೀದಿಬದಿ ವ್ಯಾಪಾರಿಗಳಿಗೆ, ಸಣ್ಣಪುಟ್ಟ ಅಂಗಡಿ ಹೊಂದಿದವರಿಗೆ 10 ಸಾವಿರ ರೂಪಾಯಿವರೆಗೆ ಸಾಲ ನೀಡಲಾಗುತ್ತದೆ. 13 ಜಿಲ್ಲೆಗಳ ವ್ಯಾಪ್ತಿಯ 10 ಲಕ್ಷ ಫಲಾನುಭವಿಗಳಿಗೆ ಸಾಲ ನೀಡುವ ಯೋಜನೆಗೆ ಸಿಎಂ ಜಗನ್ ಚಾಲನೆ ನೀಡಿದ್ದಾರೆ.
10 ಲಕ್ಷ ಜನರಿಗೆ ತಲಾ 10 ಸಾವಿರ ರೂಪಾಯಿ ಸಾಲ ನೀಡಲಾಗುವುದು. ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸರ್ಕಾರದಿಂದ ನೇರ ವರ್ಗಾವಣೆ ಮೂಲಕ ಹಣ ಜಮಾ ಮಾಡಲಾಗುತ್ತದೆ. ಸರ್ಕಾರದಿಂದ ಬಡ್ಡಿ ಪಾವತಿಸಲಿದ್ದು, ಯೋಜನೆಗಾಗಿ ಪ್ರತ್ಯೇಕ ವೆಬ್ಸೈಟ್ ಆರಂಭಿಸಲಾಗಿದೆ.
ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಆಗುವುದರಿಂದ ಮಧ್ಯವರ್ತಿಗಳಿಗೆ ಅವಕಾಶ ಇರುವುದಿಲ್ಲ. ಕ್ಯೂಆರ್ ಕೋಡ್ ಹೊಂದಿದ ಗುರುತಿನ ಚೀಟಿಯನ್ನು ನೀಡಲಾಗಿದ್ದು, ಅರ್ಜಿ ಸಲ್ಲಿಕೆ ಆರಂಭವಾಗಿದೆ. 1,44,486 ತರಕಾರಿ ವ್ಯಾಪಾರಿಗಳು ಅರ್ಜಿ ಸಲ್ಲಿಸಿದ್ದು, 1,24,725 ಕಿರಾಣಿ ಅಂಗಡಿಯವರು, 85,330 ಕ್ಯಾಂಟೀನ್ ಹೊಂದಿದವರು, 26,094 ರಸ್ತೆ ಬದಿ ವ್ಯಾಪಾರಿಗಳು, 26,094 ಸಣ್ಣಪುಟ್ಟ ಅಂಗಡಿಯವರು ಸುಮಾರು 4ಲಕ್ಷ ಇತರೆ ಸಣ್ಣ ವ್ಯಾಪಾರಿಗಳು ಮತ್ತು ಮಾರಾಟಗಾರರಿಗೆ ಯೋಜನೆಯ ಪ್ರಯೋಜನ ಸಿಗಲಿದೆ ಎಂದು ಹೇಳಲಾಗಿದೆ.