
ಬೆಂಗಳೂರು: ತೈವಾನ್ ಮೂಲದ ಫಾಕ್ಸ್ ಕಾನ್ ಕಂಪನಿ ರಾಜ್ಯದಲ್ಲಿ ಬೃಹತ್ ಐಫೋನ್ ಉತ್ಪಾದನಾ ಘಟಕ ಆರಂಭಿಸಲು ಮುಂದಾಗಿದೆ. ಇದರಿಂದ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ.
ವಿಶ್ವದ ಪ್ರಮುಖ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಿಕಾ ಕಂಪನಿಯಾಗಿರುವ ಹಾನ್ ಹಾಯ್ ಟೆಕ್ನಾಲಜಿ ಗ್ರೂಪ್ ಫಾಕ್ಸ್ ಕಾನ್ ರಾಜ್ಯದಲ್ಲಿ ಆಪಲ್ ಐಫೋನ್ ಉತ್ಪಾದನಾ ಘಟಕ ಆರಂಭಿಸುವ ಕುರಿತಂತೆ ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಈ ಹೂಡಿಕೆಯಿಂದ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ಉದ್ಯಮ ಸ್ಥಾಪನೆಗಾಗಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಮೀಪದ ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲೂಕುಗಳಲ್ಲಿ 300 ಎಕರೆ ಜಾಗ ಗುರುತಿಸಲಾಗಿದೆ.
ಫಾಕ್ ಕಾನ್ ಅಧ್ಯಕ್ಷ ಯಂಗ್ ಲಿಯು ಹಾಗೂ ಕಂಪನಿಯ 17 ಉನ್ನತ ಅಧಿಕಾರಿಗಳ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದು, ಈ ಸಂದರ್ಭದಲ್ಲಿ ಸಚಿವರಾದ ಮುರುಗೇಶ್ ನಿರಾಣಿ, ಡಾ.ಸಿ.ಎನ್. ಅಶ್ವತ್ಥನಾರಾಯಣ ಮೊದಲಾದವರು ಇದ್ದರು.