ನವದೆಹಲಿ: ಜಾಗತಿಕ ಹೂಡಿಕೆದಾರರೊಂದಿಗೆ ಪ್ರಧಾನಿ ಮೋದಿ ದುಂಡು ಮೇಜಿನ ಸಭೆ ನಡೆಸಲಿದ್ದಾರೆ. ಭಾರತಕ್ಕೆ ಬಂಡವಾಳ ಹರಿದು ಬಂದರೆ ಉದ್ಯೋಗಗಳ ಮಹಾಪೂರವೇ ಸೃಷ್ಠಿಯಾಗಲಿದೆ ಎನ್ನಲಾಗಿದೆ.
ಕೊರೋನಾ ವೈರಸ್ ನಿಂದಾಗಿ ಕೋಟ್ಯಂತರ ಜನ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಧಾನಿ ಮುಂದಾಗಿದ್ದು ಇಂದಿನಿಂದ ಎರಡು ವಾರ ಕಾಲ ಜಾಗತಿಕ ಹೂಡಿಕೆದಾರರೊಂದಿಗೆ ಸಭೆ ನಡೆಸಲಿದ್ದಾರೆ. ವಿಶ್ವದ ಪ್ರಮುಖ 20 ಹೂಡಿಕೆದಾರರೊಂದಿಗೆ ಸಭೆ ನಡೆಸಲಿದ್ದು, ಭಾರತದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ತಿಳಿಸಲಿದ್ದಾರೆ.
ಜಪಾನ್, ಆಸ್ಟ್ರೇಲಿಯಾ, ಯುರೋಪ್ ಬಂಡವಾಳ ಹೂಡಿಕೆದಾರರಿಗೆ ಆಹ್ವಾನಿಸಲಾಗುವುದು. ಸುಮಾರು 450 ಲಕ್ಷ ಕೋಟಿ ರೂಪಾಯಿ ಬಂಡವಾಳ ಇರುವ ಈ 20 ಹೂಡಿಕೆದಾರರಿಗೆ ಆಹ್ವಾನ ನೀಡಲಾಗುವುದು. ಹಲವು ಕಂಪನಿಗಳ ಸಿಇಒಗಳ ಜೊತೆಗೆ ಚರ್ಚೆ ನಡೆಸಲಿದ್ದಾರೆ.
ಒಬ್ಬೊಬ್ಬರ ಜೊತೆಗೂ ಪ್ರತ್ಯೇಕವಾಗಿ ಚರ್ಚೆ ನಡೆಯಲಿದ್ದು, ಭಾರತದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು. ಕೇಂದ್ರ ಸರ್ಕಾರ ಹೂಡಿಕೆದಾರರಿಗೆ ಎಲ್ಲ ಸೌಲಭ್ಯ ಒದಗಿಸಿಕೊಡಲಿದೆ ಎಂದು ಮೋದಿ ತಿಳಿಸಲಿದ್ದಾರೆ.
ಮೋದಿ ಮಾತುಕತೆ ಯಶಸ್ವಿಯಾದರೆ ಭಾರತಕ್ಕೆ 1 ಲಕ್ಷ್ಮ ಕೋಟಿ ರೂಪಾಯಿ ಬಂಡವಾಳ ಹರಿದು ಬರಲಿದ್ದು ಆಟೋಮೊಬೈಲ್, ಸ್ಮಾರ್ಟ್ ಫೋನ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಸೋಲಾರ್ ವಿದ್ಯುತ್, ಮೂಲಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಯಾಗಲಿದೆ. ವಿದೇಶಿ ಹೂಡಿಕೆದಾರರು ಮಾತ್ರವಲ್ಲದೆ, ಭಾರತದ ಖ್ಯಾತನಾಮ ಉದ್ಯಮಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇದರಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಹೇಳಲಾಗಿದೆ.