ಬೆಂಗಳೂರು: ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅಧ್ಯಕ್ಷತೆಯ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನ ಸಮಿತಿಯು 3607.19 ಕೋಟಿ ರೂ. ಬಂಡವಾಳ ಹೂಡಿಕೆಯ 62 ಯೋಜನೆಗಳಿಗೆ ಅನುಮೋದನೆ ನೀಡಿದೆ.
ಈ ಯೋಜನೆಗಳಿಂದ 10,755 ಮಂದಿಗೆ ಉದ್ಯೋಗಾವಕಾಶ ಸಿಗಲಿದೆ. ಎಂ.ಬಿ. ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಯ 141ನೇ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಧಾರವಾಡ, ಯಾದಗಿರಿ, ರಾಯಚೂರು, ಗದಗ, ಬೆಂಗಳೂರಿನಲ್ಲಿ ಹೂಡಿಕೆ ಮಾಡಲಾಗುತ್ತಿದೆ.
50 ಕೋಟಿ ರೂ.ಗಿಂತ ಹೆಚ್ಚಿನ ಬಂಡವಾಳ ಹೂಡಿಕೆಯ 8 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇವುಗಳಿಂದ ರಾಜ್ಯದಲ್ಲಿ 2088.44 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, 6360 ಜನರಿಗೆ ಉದ್ಯೋಗಾವಕಾಶ ಸಿಗಲಿದೆ.
15 ಕೋಟಿ ರೂ. ನಿಂದ 50 ಕೋಟಿ ರೂ. ಮೊತ್ತದ ಒಳಗಿನ ಬಂಡವಾಳ ಹೂಡಿಕೆಯ 51 ಹೊಸ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, 941.40 ಕೋಟಿ ರೂ. ಬಂಡವಾಳ ಹೂಡಿಕೆಯಾಗಿ ಸುಮಾರು 4395 ಜನರಿಗೆ ಉದ್ಯೋಗಾವಕಾಶ ಸಿಗಲಿದೆ.
ಹೆಚ್ಚುವರಿ ಬಂಡವಾಳ ಹೂಡಿಕೆಯ ಮೂರು ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, 577.35 ಕೋಟಿ ರೂ. ಹೂಡಿಕೆಯಾಗಲಿದೆ.
ಪ್ರಮುಖವಾಗಿ ಟೆಕ್ಸ್ ಕಾನ್ ಸ್ಟೀಲ್ಸ್ ಲಿಮಿಟೆಡ್, ವಿರೂಪಾಕ್ಷ ಲ್ಯಾಬೋರೇಟರಿಸ್, ಹುಂಡ್ರಿ ಶುಗರ್ಸ್ ಅಂಡ್ ಎಥೆನಾಲ್, ಕ್ವಾಲ್ ಕಾಮ್ ಇಂಡಿಯಾ, ಎಲ್.ಆರ್.ಬಿ. ವುಡ್ ಇಂಡಸ್ಟ್ರಿ, ಮಾತಾ ಇಂಡಸ್ಟ್ರೀಸ್ ಸೇರಿದಂತೆ ಹಲವು ಕಂಪನಿಗಳ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.