ನವದೆಹಲಿ: ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳಲ್ಲಿ 10 ಲಕ್ಷ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತ ಹೂಡಿಕೆ ಮಾಡುವವರು ಆದಾಯ ಮೂಲದ ಪುರಾವೆ ಒದಗಿಸುವ ನಿಯಮವನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.
ಮೇ 25 ರಂದು ಈ ಬಗ್ಗೆ ಸುತ್ತೋಲೆ ಹೊರಡಿಸಲಾಗಿದ್ದು, ಕೆಲವು ವರ್ಗದ ಸಣ್ಣ ಉಳಿತಾಯ ಯೋಜನೆಗಳ ಹೂಡಿಕೆದಾರರಿಂದ ಆದಾಯ ಪುರಾವೆ ಸಂಗ್ರಹಿಸುವಂತೆ ಅಂಚೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಅಕ್ರಮ ಹಣದ ವ್ಯವಹಾರಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಂಡಿದ್ದು, ಸಣ್ಣ ಉಳಿತಾಯ ಯೋಜನೆಗಳ ಹೂಡಿಕೆಯಲ್ಲಿ ಕೆವೈಸಿ ಮಾನದಂಡಗಳ ಹೊರತಾಗಿಯೂ ಹೂಡಿಕೆ ಮೊತ್ತದ ಪುರಾವೆಯನ್ನು ಸಂಗ್ರಹಿಸಬೇಕು ಎಂದು ಹೇಳಲಾಗಿದೆ.
ಗ್ರಾಹಕರು ಖಾತೆ ತೆರೆಯಲು, ಪ್ರಮಾಣ ಪತ್ರ ಖರೀದಿಸಲು ಅರ್ಜಿ ಸಲ್ಲಿಸಿದಾಗ ಅಥವಾ ಅಸ್ತಿತ್ವದಲ್ಲಿರುವ ಯಾವುದೇ ಉಳಿತಾಯ ಸಾಧನದ ಮೆಚ್ಯೂರಿಟಿ, ಪ್ರಿಮೆಚ್ಯೂರಿಟಿ ಮೌಲ್ಯದ ಕ್ರೆಡಿಟ್ ಗಾಗಿ ಅರ್ಜಿ ಸಲ್ಲಿಸಿದಲ್ಲಿ ಆ ಮೊತ್ತವು 10 ಲಕ್ಷ ರೂಪಾಯಿ ಮೀರಿದ್ದರೆ ಆ ಖಾತೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು. ಅಂತಹ ಗ್ರಾಹಕರಿಂದ ಆದಾಯ ಮೂಲದ ಪುರಾವೆ ಕೇಳಲಾಗುತ್ತದೆ. ಗ್ರಾಹಕರು ಹೂಡಿಕೆ ಮಾಡಲು ಹಣದ ರಶೀದಿಗಳ ಮೂಲವನ್ನು ತೋರಿಸುವ ದಾಖಲೆ ಪ್ರತಿ ಸಲ್ಲಿಸಬೇಕು.
ಹಣದ ಮೂಲ ಪ್ರತಿಬಿಂಬಿಸುವ ಬ್ಯಾಂಕ್, ಪೋಸ್ಟ್ ಆಫೀಸ್ ಸ್ಟೇಟ್ಮೆಂಟ್ ಗಳು, ಹೂಡಿಕೆಯ ಮೊತ್ತ ಪ್ರತಿಬಿಂಬಿಸುವ ಕಳೆದ ಮೂರು ವರ್ಷಗಳಲ್ಲಿ ಸಲ್ಲಿಸಿದ ಐಟಿ ರಿಟರ್ನ್ಸ್ ಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬೇಕು. ಸೇಲ್ ಡೀಡ್, ಗಿಫ್ಟ್ ಡೀಡ್, ವಿಲ್, ಆಡಳಿತ ಪತ್ರ, ಉತ್ತರಾಧಿಕಾರ ಪತ್ರ ಮೊದಲಾದ ಆದಾಯ ಪ್ರಮಾಣ ಪತ್ರ ಮೂಲವನ್ನು ಪ್ರತಿನಿಧಿಸುವ ದಾಖಲೆ ಪತ್ರ ಕೊಡಬೇಕು.
ಸುತ್ತೋಲೆಯ ಪ್ರಕಾರ ಮರು ಕೆವೈಸಿ ಮಾಡಬೇಕು. ಹೆಚ್ಚಿನ ಅಪಾಯ, ಮಾಧ್ಯಮ ಅಪಾಯ ಮತ್ತು ಕಡಿಮೆ ಅಪಾಯದ ಗ್ರಾಹಕರಿಗೆ ಮರು ಕೆವೈಸಿಯನ್ನು ಕ್ರಮವಾಗಿ ಎರಡು ವರ್ಷ, ಐದು ವರ್ಷ, ಏಳು ವರ್ಷಗಳಿಗೆ ಒಮ್ಮೆ ಮಾಡಬೇಕು ಎಂದು ಹೇಳಲಾಗಿದೆ.