ನವದೆಹಲಿ: ಬ್ಯಾಂಕ್ ಸಾಲವನ್ನು ಅನುತ್ಪಾದಕ ಸಾಲವೆಂದು ಘೋಷಿಸಬಾರದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಎಲ್ಲಾ ಬ್ಯಾಂಕುಗಳಿಗೆ ಸುಪ್ರೀಂ ಕೋರ್ಟ್ ನಿಂದ ಮಹತ್ವದ ಸೂಚನೆ ನೀಡಲಾಗಿದೆ.
ಬ್ಯಾಂಕಿನಿಂದ ಸಾಲ ಪಡೆದವರು ಮರುಪಾವತಿ ಮಾಡದಿದ್ದರೆ ಅಂತಹ ಸಾಲವನ್ನು ಅನುತ್ಪಾದಕ ಸಾಲವೆಂದು ಘೋಷಿಸಬಾರದು ಎಂದು ಹೇಳಲಾಗಿದೆ.
ಮೊರಾಟೋರಿಯಂ ಅವಧಿ, ಸಾಲದ ಮೇಲೆ ಚಕ್ರಬಡ್ಡಿ ವಿಧಿಸುವ ವಿಚಾರದ ಬಗ್ಗೆಯೂ ನಿಮ್ಮ ತೀರ್ಮಾನವನ್ನು ತಿಳಿಸಬೇಕು ಎಂದು ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಗೆ ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ.
ಕೊನೆಯ ಬಾರಿಗೆ ನಿಮಗೆ ಕಾಲಾವಕಾಶ ನೀಡುತ್ತಿದ್ದೇವೆ ಎಂದು ಸುಪ್ರೀಂಕೋರ್ಟ್ ಹೇಳಿದ್ದು, ಮತ್ತೆ ವಿಚಾರಣೆಯನ್ನು ಮುಂದೂಡುವುದಿಲ್ಲವೆಂದು ತಿಳಿಸಿದೆ. ಕೇಂದ್ರ ಸರ್ಕಾರದ ಮನವಿ ಮೇರೆಗೆ ಎರಡು ವಾರ ಕಾಲಾವಕಾಶ ನೀಡಲಾಗಿದೆ. ಯಾವ ವಲಯಕ್ಕೆ ಯಾವ ರೀತಿಯ ಸಾಲ ಪುನಾರಚನೆ ಮಾಡಲಾಗುವುದು ಎಂಬುದರ ಬಗ್ಗೆ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಬೇಕೆಂದು ಸೂಚಿಸಲಾಗಿದ್ದು, ಸೆಪ್ಟೆಂಬರ್ 25 ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.