ಬ್ಯಾಂಕಿನ ನಿಶ್ಚಿತ ಠೇವಣಿಗಳು ಗ್ಯಾರಂಟಿ ರಿಟರ್ನ್ಸ್ ನೀಡುವ ಸಾಧನಗಳಾಗಿವೆ. ಇವು ಗ್ರಾಹಕರಿಗೆ ದೊಡ್ಡ ಮೊತ್ತದ ಹೂಡಿಕೆಗೆ ಅವಕಾಶ ಹಾಗೂ ನಿಶ್ಚಿತ ಬಡ್ಡಿದರದ ಗಳಿಕೆಯನ್ನು ನೀಡುತ್ತವೆ.
ನಿಶ್ಚಿತ ಠೇವಣಿಯು 7 ದಿನಗಳಿಂದ ಆರಂಭವಾಗಿ 10 ವರ್ಷಗಳ ತನಕ ವಿವಿಧ ಅವಧಿಗೆ ಲಭ್ಯವಿದೆ, ಅಂದರೆ ನಿಮ್ಮ ಹೂಡಿಕೆಯ ಲಾಕಿಂಗ್ ಅವಧಿಯನ್ನು ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ನಿಶ್ಚಿತ ಠೇವಣಿಯ ಬಡ್ಡಿ ದರ ಮಾರುಕಟ್ಟೆಯ ವ್ಯತ್ಯಯದೊಂದಿಗೆ ಬದಲಾವಣೆಯಾಗುವುದಿಲ್ಲ. ಹಾಗಾಗಿ ನಿಮ್ಮ ಹೂಡಿಕೆಗೆ ಖಾತ್ರಿಯ ರಿಟರ್ನ್ ಅನ್ನು ನೀಡುತ್ತದೆ. ನಿಮ್ಮ ಹಣಕಾಸು ಗುರಿಗಳ ಪ್ರಕಾರ ನಿಶ್ಚಿತ ಠೇವಣಿಯನ್ನು ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ. 1 ಕೋಟಿ ರೂ. ತನಕ ನಿಶ್ಚಿತ ಠೇವಣಿ ಇಡಬಹುದು.
ನಿಮಗೆ ಮೂರು ವರ್ಷಗಳಲ್ಲಿ ಒಂದು ಕಾರು ಖರೀದಿಸಬೇಕಿದೆ, ಅದಕ್ಕೆ ಡೌನ್ ಪೇಮೆಂಟ್ ನೀಡೋದಿಕ್ಕೆ ಹಣ ಜೋಡಿಸಬೇಕಾಗಿದೆ ಎಂದಿಟ್ಟುಕೊಳ್ಳಿ. ಅದಕ್ಕೆ ತಕ್ಕಷ್ಟು ಹಣವನ್ನು ನೀವು ನಿಶ್ಚಿತ ಠೇವಣಿಯಲ್ಲಿ ಹಾಕಿಡಬಹುದು. ನಿಮ್ಮ ಕೈಗೆ ಎಷ್ಟು ಹಣ ಸಿಗುತ್ತದೆ ಎಂಬುದು ಹೂಡಿಕೆ ಮಾಡುವ ವೇಳೆಗೇ ತಿಳಿದುಬಿಡುತ್ತದೆ.
ಗಮನಿಸಿ, ಯಾವುದೇ ಬ್ಯಾಂಕ್ಗಳಲ್ಲಿನ ನಿಶ್ಚಿತ ಠೇವಣಿಯ ಬಡ್ಡಿ ರೂಪದಲ್ಲಿ 10 ಸಾವಿರ ರೂ.ಗಿಂತ ಮೇಲ್ಪಟ್ಟು ಗಳಿಸುವ ಆದಾಯಕ್ಕೆ ತೆರಿಗೆ ಕಟ್ಟಬೇಕಾಗುತ್ತದೆ.
ಎಸ್ಬಿಐ, ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಸಹಿತ ಎಲ್ಲಾ ಬ್ಯಾಂಕ್ಗಳಲ್ಲಿ ನಿಶ್ಚಿತ ಠೇವಣಿ ಸೌಲಭ್ಯ ಇರುತ್ತದೆ. ಹಿರಿಯ ನಾಗರಿಕರಿಗೆ ಎಲ್ಲಾ ಬ್ಯಾಂಕ್ಗಳು ಶೇ.0.5 ರಷ್ಟು ಹೆಚ್ಚು ಬಡ್ಡಿದರ ನೀಡುತ್ತವೆ.