ಕೋವಿಡ್ -19 ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರ ವಿಮಾ ಯೋಜನೆ ಅವಧಿಯನ್ನು 180 ದಿನಗಳವರೆಗೆ ವಿಸ್ತರಿಸಲಾಗಿದೆ. ಇಲ್ಲಿಯವರೆಗೆ 1,351 ಕ್ಲೇಮ್ಗಳನ್ನು ಪಾವತಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.
COVID-19 ವಿರುದ್ಧ ಹೋರಾಡುವ ಆರೋಗ್ಯ ಕಾರ್ಯಕರ್ತರಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್(PMGKP) ಅಡಿಯಲ್ಲಿ ವಿಮಾ ಯೋಜನೆ ಪಾಲಿಸಿಯ ಪ್ರಸ್ತುತ ಅವಧಿ ಅಕ್ಟೋಬರ್ 20 ರಂದು ಕೊನೆಗೊಳ್ಳಲಿದೆ ಎಂದು ಹೇಳಲಾಗಿತ್ತು.
ಕೋವಿಡ್ -19 ಸಾಂಕ್ರಾಮಿಕ ರೋಗ ಇನ್ನೂ ಕಡಿಮೆಯಾಗಿಲ್ಲ ಮತ್ತು ಕೋವಿಡ್-ಸಂಬಂಧಿತ ಕರ್ತವ್ಯಗಳಿಗಾಗಿ ನಿಯೋಜಿಸಲಾದ ಆರೋಗ್ಯ ಕಾರ್ಯಕರ್ತರ ಸಾವುಗಳು ಇನ್ನೂ ವಿವಿಧ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ವರದಿಯಾಗುತ್ತಿರುವುದರಿಂದ ವಿಮಾ ಪಾಲಿಸಿಯನ್ನು 21.10.2021 ರಿಂದ ವಿಸ್ತರಿಸಲಾಗಿದೆ.
ಕೋವಿಡ್ -19 ರೋಗಿಗಳ ಆರೈಕೆಗಾಗಿ ನಿಯೋಜನೆಗೊಂಡಿರುವ ಆರೋಗ್ಯ ಕಾರ್ಯಕರ್ತರ ಅವಲಂಬಿತರಿಗೆ ಸುರಕ್ಷತೆ ಒದಗಿಸಲು ಅವಧಿಯನ್ನು 180 ದಿನಗಳ ಹೆಚ್ಚಿನ ಅವಧಿಗೆ ಮುಂದುವರಿಸಲಾಗಿದೆ ಎನ್ನಲಾಗಿದೆ. ಈವರೆಗೆ 1,351 ಕ್ಲೇಮ್ಗಳನ್ನು ಈ ಯೋಜನೆಯಡಿ ಪಾವತಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದ್ದು, ಆರೋಗ್ಯ ಕಾರ್ಯಕರ್ತರಲ್ಲಿ ವ್ಯಾಪಕ ಪ್ರಚಾರಕ್ಕಾಗಿ ಸೂಚನೆ ನೀಡಲಾಗಿದೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್(PMGKP):
ಕೋವಿಡ್ -19 ವಿರುದ್ಧ ಹೋರಾಡುವ ಆರೋಗ್ಯ ಕಾರ್ಯಕರ್ತರಿಗೆ ವಿಮಾ ಯೋಜನೆಯನ್ನು ಕಳೆದ ವರ್ಷ ಮಾರ್ಚ್ 30 ರಂದು ಆರಂಭಿಸಲಾಯಿತು. ಕೋವಿಡ್ -19 ರೋಗಿಗಳ ನೇರ ಸಂಪರ್ಕ ಮತ್ತು ಆರೈಕೆಯಲ್ಲಿರುವ ಸಮುದಾಯ ಆರೋಗ್ಯ ಕಾರ್ಯಕರ್ತರು ಮತ್ತು ಖಾಸಗಿ ಆರೋಗ್ಯ ಕಾರ್ಯಕರ್ತರು ಸೇರಿದಂತೆ 22.12 ಲಕ್ಷ ಜನರಿಗೆ 50 ಲಕ್ಷ ರೂ. ವಿಮೆ ಸೌಲಭ್ಯ ಕಲ್ಪಿಸಲಾಗಿದೆ.
ಖಾಸಗಿ ಆಸ್ಪತ್ರೆ ಸಿಬ್ಬಂದಿ, ನಿವೃತ್ತರು, ಸ್ವಯಂಸೇವಕರು, ಸ್ಥಳೀಯ ನಗರ ಸಂಸ್ಥೆಗಳು, ಗುತ್ತಿಗೆ, ದಿನಗೂಲಿ, ತಾತ್ಕಾಲಿಕ ಮತ್ತು ಹೊರಗುತ್ತಿಗೆ ಸಿಬ್ಬಂದಿ, ರಾಜ್ಯಗಳು, ಕೇಂದ್ರ ಆಸ್ಪತ್ರೆಗಳು, ಕೇಂದ್ರಾಡಳಿತ ಪ್ರದೇಶಗಳ ಸ್ವಾಯತ್ತ ಆಸ್ಪತ್ರೆಗಳು, ಏಮ್ಸ್ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ ಮತ್ತು ಕೇಂದ್ರ ಸಚಿವಾಲಯಗಳ ಆಸ್ಪತ್ರೆಗಳು, ಕೋವಿಡ್ -19 ರೋಗಿಗಳ ಆರೈಕೆಗಾಗಿ ರಚಿಸಲಾದ ಕೇಂದ್ರಗಳ ಆರೋಗ್ಯ ಕಾರ್ಯಕರ್ತರು ಕೂಡ ಪಿಎಂಜಿಕೆಪಿ ವ್ಯಾಪ್ತಿಗೆ ಒಳಪಟ್ಟಿದ್ದಾರೆ ಎಂದು ಹೇಳಲಾಗಿದೆ.