ಭಾರತದ ಎರಡನೇ ಅತಿದೊಡ್ಡ ಸಾಫ್ಟ್ವೇರ್ ಕಂಪನಿ ಇನ್ಪೋಸಿಸ್ ಭಾರತ ಹಾಗೂ ವಿದೇಶದ ಕಾಲೇಜುಗಳ 26 ಸಾವಿರ ಫ್ರೆಶರ್ಗಳಿಗೆ ಉದ್ಯೋಗ ನೀಡಲು ನಿರ್ಧರಿಸಿದೆ. 2021ರ ಮೊದಲ ತ್ರೈಮಾಸಿಕ (ಜನವರಿ – ಮಾರ್ಚ್)ದಲ್ಲಿ 15 ಪ್ರತಿಶತ ಲಾಭವನ್ನ ಗಳಿಸಿರುವ ಈ ಸಂಸ್ಥೆ ಇದೀಗ ಉದ್ಯೋಗಾಕಾಂಕ್ಷಿಗಳಿಗೆ ಈ ಗುಡ್ ನ್ಯೂಸ್ ನೀಡಿದೆ.
ಈ ವಿಚಾರವಾಗಿ ಮಾತನಾಡಿದ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್ ಕುಮಾರ್ ರಾವ್, ಕಂಪನಿಯು ಕಾಂಪನ್ಸೇಷನ್ ಸೈಕಲ್ನ್ನು ಮುಂದುವರಿಸಲಿದೆ ಎಂದು ಹೇಳಿದ್ರು.
ಕಳೆದ ವರ್ಷ ಕೋವಿಡ್ ಸಂಕಷ್ಟದಿಂದಾಗಿ ಇನ್ಫೋಸಿಸ್ ಕಂಪನಿಯು ತನ್ನ ಸಿಬ್ಬಂದಿಗೆ ಕೆಲಸದಲ್ಲಿ ಬಡ್ತಿ ಹಾಗೂ ಸಂಬಳ ಏರಿಕೆಗಳನ್ನ ನೀಡಿರಲಿಲ್ಲ. ಆದರೆ ಈ ವರ್ಷ ಬಡ್ತಿ, ಸಂಬಳ ಏರಿಕೆಯ ಲಾಭ ಸಿಬ್ಬಂದಿಗೆ ಸಿಗಲಿದೆ.
ಡಿಜಿಟಲ್ ವ್ಯವಹಾರದಲ್ಲಿ 50 ಪ್ರತಿಶತಕ್ಕಿಂತ ಹೆಚ್ಚಿನ ಪಾಲನ್ನ ಹೊಂದಿರುವ ಸಂದರ್ಭದಲ್ಲಿ ಕಂಪನಿಯು ತನ್ನ ಉದ್ಯೋಗಿಗಳಿಗೆ ಡಿಜಿಟಲೀಕರಣ ತರಬೇತಿಯನ್ನ ನೀಡುವಂತ ಕಾರ್ಯಕ್ರಮಗಳನ್ನ ಕಳೆದ ವರ್ಷ ರೂಪಿಸಿತ್ತು ಎಂದು ಇನ್ಫೋಸಿಸ್ ಸಿಇಓ ಸಲೀಲ್ ಪರೇಖ್ ಹೇಳಿದ್ದಾರೆ.
5 ಪ್ರತಿಶತ ಆರ್ಥಿಕ ಪ್ರಗತಿಯೊಂದಿಗೆ ಕಂಪನಿಯು 2021ರ ಮೊದಲ ತ್ರೈಮಾಸಿಕದಲ್ಲಿ 10000 ಕೋಟಿ ಆದಾಯದ ಮೈಲಿಗಲ್ಲನ್ನ ತಲುಪಿದೆ. ಕೇವಲ ಡಿಜಿಟಲ್ ಮೂಲದಿಂದಲೂ ಕಂಪನಿ 29.4 ಪ್ರತಿಶತ ಬೆಳವಣಿಗೆ ಕಂಡಿದೆ. ಹೂಡಿಕೆದಾರರಿಗೆ 9200 ಕೋಟಿ ರೂಪಾಯಿ ಮೌಲ್ಯದ ಶೇರ್ ಬುಕ್ ಪ್ಲಾನ್ನ್ನೂ ಕಂಪನಿ ಬೋರ್ಡ್ ಅಂಗೀಕರಿಸಿದೆ.
ಅಮೆರಿಕದಲ್ಲಿ ಹೆಚ್ 1 ಬಿ ವೀಸಾ ಪ್ರಕ್ರಿಯೆಯಲ್ಲಿ ಬಿಡೆನ್ ಸರ್ಕಾರ ತರುತ್ತಿರುವ ಬದಲಾವಣೆಗಳನ್ನ ಗಮನದಲ್ಲಿರಿಸಿಕೊಂಡು ಮಾತನಾಡಿದ ಇನ್ಫೋಸಿಸ್ ಸಿಒಒ , ಆದಷ್ಟು ಸ್ಥಳೀಯರನ್ನ ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಗುತ್ತೆ ಎಂದು ಹೇಳಿದ್ರು.