ಕಳೆದ ವರ್ಷ ಲಾಕ್ಡೌನ್ನಿಂದಾಗಿ ತಮ್ಮ ವಿಮಾನಯಾನ ಸೇವೆಯನ್ನ ಸ್ಥಗಿತಗೊಳಿಸಿದ್ದರಿಂದ ಈಗಾಗಲೇ ಬುಕ್ಕಿಂಗ್ ಮಾಡಿದ್ದ ಗ್ರಾಹಕರಿಗೆ 99.5 ಪ್ರತಿಶತ ಹಣವನ್ನ ನಾವು ಮರುಪಾವತಿ ಮಾಡಿದ್ದೇವೆ ಎಂದು ಇಂಡಿಗೋ ಹೇಳಿದೆ.
ಕಳೆದ ವರ್ಷ ಲಾಕ್ಡೌನ್ ಕಾರಣದಿಂದಾಗಿ ವಿಮಾನಯಾನ ಮಾಡಲು ಸಾಧ್ಯವಾಗದವರಿಗೆ ಅವರ ಹಣ ಮರುಪಾವತಿ ಮಾಡಿ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.
ದೇಶದ ಅತಿದೊಡ್ಡ ಖಾಸಗಿ ವಿಮಾನಯಾನ ಸಂಸ್ಥೆಯಾಗಿರುವ ಇಂಡಿಗೋ, ಸುಪ್ರೀಂ ಕೋರ್ಟ್ನ ಈ ಆದೇಶ ಸಂಬಂಧ ಸ್ಪಷ್ಟನೆ ನೀಡಿದ್ದು, ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಯಾಗಿದ್ದರಿಂದ ಕ್ಯಾನ್ಸಲ್ ಆದ ವಿಮಾನಗಳಲ್ಲಿ ಟಿಕೆಟ್ ಕಾಯ್ದಿರಿಸಿದ್ದ ಗ್ರಾಹಕರ ಹಣವನ್ನ ತ್ವರಿತ ಗತಿಯಲ್ಲಿ ರಿಫಂಡ್ ಮಾಡುತ್ತಿದ್ದೇವೆ ಎಂದು ಹೇಳಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಇಂಡಿಗೋ ವಕ್ತಾರ, ನಮ್ಮ ವಿಮಾನಯಾನ ಸಂಸ್ಥೆ ಈಗಾಗಲೇ 1030 ಕೋಟಿ ರೂಪಾಯಿ ಮೊತ್ತವನ್ನ ಮರುಪಾವತಿ ಮಾಡಿದೆ. ಇದು ಗ್ರಾಹಕರಿಗೆ ಮರುಪಾವತಿ ಮಾಡಬೇಕಾದ ಒಟ್ಟು ಮೊತ್ತದ 99.5 ಪ್ರತಿಶತದಷ್ಟಿದೆ. ಉಳಿದ ಗ್ರಾಹಕರ ಬಳಿ ಬ್ಯಾಂಕ್ ಖಾತೆ ವಿವರ ಪಡೆಯಲಾಗುತ್ತಿದ್ದು, ಶೀಘ್ರದಲ್ಲೇ ಎಲ್ಲರಿಗೂ ಅವರ ಹಣ ಮರುಪಾವತಿಯಾಗಲಿದೆ ಎಂದು ಹೇಳಿದ್ರು.