
ಕೋಳಿ, ಮೊಟ್ಟೆ ಇಡುವುದು ಎಲ್ಲರಿಗೂ ಗೊತ್ತೇ ಇದೆ. ಕೋಳಿ ಮೊಟ್ಟೆ ಸಸ್ಯಾಹಾರಿಯೋ ? ಮಾಂಸಾಹಾರಿಯೋ ? ಎನ್ನುವ ಜಿಜ್ಞಾಸೆ ಇನ್ನೂ ಬಗೆಹರಿದಿಲ್ಲ. ಇದೀಗ ಕೋಳಿಯೇ ಇಲ್ಲದೆ ಮೊಟ್ಟೆ ಹುಟ್ಟಲಿದೆ. ಅದೂ ದ್ವಿದಳ ಧಾನ್ಯಗಳಲ್ಲಿನ ಪ್ರೋಟಿನ್ ನಿಂದ.
ಹೌದು, ಅಮೆರಿಕಾದ ನೆರವಿನೊಂದಿಗೆ ಭಾರತದ ನವೋದ್ಯಮವೊಂದು ಈ ಪ್ರಯತ್ನಕ್ಕೆ ಹಾಕಿದ್ದು, ಅ.13 ರ ವಿಶ್ವ ಮೊಟ್ಟೆ ದಿನದ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಿದೆ. ಸದ್ಯಕ್ಕಿದಿನ್ನೂ ಸಂಶೋಧನೆ ಹಂತದಲ್ಲಿದ್ದು, ಎಲ್ಲವೂ ಅಂದುಕೊಂಡಂತೆಯೇ ಆದರೆ 2021 ರ ಏಪ್ರಿಲ್ ತಿಂಗಳಿನಲ್ಲಿ ಮಾರುಕಟ್ಟೆಗೆ ಬರಲಿದೆ ಸಸ್ಯಾಹಾರಿ ಮೊಟ್ಟೆ.
ಅಮೆರಿಕಾದ ಆಹಾರ ಮತ್ತು ಕೃಷಿ ಸಂಘ (ಎಫ್ಎಓ)ದ ಪ್ರಕಾರ ಒಬ್ಬ ಮನುಷ್ಯ ಒಂದು ವರ್ಷಕ್ಕೆ ಸರಾಸರಿ 145 ಮೊಟ್ಟೆ ಬಳಸುತ್ತಾನೆ. ಮೊಟ್ಟೆ ಬಳಸಿ ತಯಾರಿಸಿದ ಅಮೆರಿಕದ ಪ್ಯಾನ್ ಕೇಕ್, ಫ್ರಾನ್ಸ್ ನ ಆಮ್ಲೆಟ್, ಥೈಲ್ಯಾಂಡ್ ನ ಥಾಯ್ ಪಾಡ್, ವಿಯೆಟ್ನಾಂ ನ ಫ್ರೈಡ್ ರೈಸ್, ಭಾರತದ ಬಾಯಲ್ಡ್ ಎಗ್ ಗಳು ಮೊಟ್ಟೆಪ್ರಿಯರ ಬಾಯಲ್ಲಿ ನೀರೂರಿಸುತ್ತವೆ.
ದ್ವಿದಳ ಧಾನ್ಯಗಳನ್ನು ಹುದುಗಿಸಿ, ಈಸ್ಟ್ ಉತ್ಪತ್ತಿ ಮಾಡಿ ಅದರಿಂದ ಪ್ರೊಟೀನ್ ಅಂಶಗಳನ್ನು ಹೀರಿ ತೆಗೆಯಲಾಗುತ್ತದೆ. ಮೊಟ್ಟೆಯೊಳಗಿನ ಕೋಳಿಯ ಪ್ರೊಟಿನ್ ನಿಂದ ತಯಾರಾದ ಹಾಗೆಯೇ ಇದೂ ಇರಲಿದೆ. ಆದರೆ, ಪ್ರಾಣಿಗಳ ಪ್ರೊಟೀನ್ ಇರುವುದಿಲ್ಲ ಹಾಗೂ ದ್ರವ ರೂಪದಲ್ಲಿ ಇರಲಿದೆ.