ಚೀನಾದ 59 ಆಪ್ ಗಳ ಮೇಲೆ ನಿಷೇಧ ಹೇರಿದ ಬಳಿಕ ಕೇಂದ್ರ ಸರ್ಕಾರದ ಕಣ್ಣು ಈಗ ಇ ಕಾಮರ್ಸ್ ಕಂಪನಿಗಳತ್ತ ತಿರುಗಿದೆ. ಅದರಲ್ಲೂ ಆನ್ ಲೈನ್ ಮಾರುಕಟ್ಟೆಯ ಬೃಹತ್ ಸಂಸ್ಥೆ ಅಮೆಜಾನ್ ಹಾಗೂ ಮಾಹಿತಿ ತಂತ್ರಜ್ಞಾನದ ಬಹು ರಾಷ್ಟ್ರೀಯ ಕಂಪನಿಗಳಾದ ಗೂಗಲ್, ಫೇಸ್ ಬುಕ್ ಗಳ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದು, ಇದು ಮುಂದಿನ ದಿನಗಳಲ್ಲಿ ಸ್ಥಳೀಯ ಸ್ಟಾರ್ಟ್ ಅಪ್ ಗಳಿಗೆ ನೆರವಾಗಲಿದೆ ಎಂದು ಹೇಳಲಾಗುತ್ತಿದೆ.
ಇ ಕಾಮರ್ಸ್ ವ್ಯವಹಾರಗಳಿಗೆ ಸಂಬಂಧಿಸಿದಂತೆ 15 ಪುಟಗಳ ವಿಸ್ತೃತವಾದ ನಿಬಂಧನೆಗಳ ಪಟ್ಟಿಯನ್ನು ಕೇಂದ್ರ ವಾಣಿಜ್ಯ ಸಚಿವಾಲಯದಿಂದ ತಯಾರಿಸಲಾಗಿದ್ದು, ಇದರಿಂದಾಗಿ ಇಂತಹ ಕಂಪನಿಗಳ ವಹಿವಾಟು, ಕಾರ್ಯ ಚಟುವಟಿಕೆ ಮೊದಲಾದವುಗಳ ಮೇಲೆ ಕಣ್ಗಾವಲು ಇರಿಸಬಹುದಾಗಿದೆ. ಇದರಿಂದ ಗ್ರಾಹಕರನ್ನು ಸೆಳೆಯಲು ಅನಗತ್ಯ ಪೈಪೋಟಿಗಳಿಗೆ ಕಡಿವಾಣ ಹಾಕಬಹುದಾಗಿದೆ.
ದೇಶದಲ್ಲಿ ಈಗ ಡಿಜಿಟಿಲ್ ವಹಿವಾಟು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಆದರೆ ಇದರಲ್ಲಿ ಅರ್ಧದಷ್ಟು ಪಾಲನ್ನು ವಿದೇಶ ಮೂಲದ ಕಂಪನಿಗಳೇ ಹೊಂದಿವೆ. ಇಂತಹ ಬೃಹತ್ ಸಂಸ್ಥೆಗಳ ಜೊತೆ ಸ್ಪರ್ಧೆ ಎದುರಿಸಲು ಭಾರತದ ಸ್ಟಾರ್ಟ್ ಅಪ್ ಕಂಪನಿಗಳು ಹಿನ್ನಡೆಯನ್ನು ಅನುಭವಿಸುತ್ತಿದ್ದವು. ಹೀಗಾಗಿ ಇ ಕಾಮರ್ಸ್ ಸೇರಿದಂತೆ ಬಹುತೇಕ ವ್ಯವಹಾರಗಳಲ್ಲಿ ಅಮೆಜಾನ್, ಗೂಗಲ್, ಫೇಸ್ ಬುಕ್ ಸಂಸ್ಥೆಗಳ ಪ್ರಾಬಲ್ಯ ಎಗ್ಗಿಲ್ಲದೇ ಮುಂದುವರೆದಿತ್ತು.
ಇದೆಲ್ಲವನ್ನೂ ಮನಗಂಡಿರುವ ಕೇಂದ್ರ ಸರ್ಕಾರ, ಭಾರತೀಯ ಸ್ಟಾರ್ಟ್ ಅಪ್ ಗಳಿಗೆ ಉತ್ತೇಜನ ನೀಡುವುದರ ಜೊತೆಗೆ ವಿದೇಶ ಕಂಪನಿಗಳಿಗೂ ಕಡಿವಾಣ ಹಾಕಲು ಮುಂದಾಗಿದೆ. ಅಲ್ಲದೇ ಒಂದೊಮ್ಮೆ ಸರ್ಕಾರ, ಗ್ರಾಹಕರ ಸುರಕ್ಷತೆ ಕಾರಣಕ್ಕಾಗಿ ಮಾಹಿತಿಗಳನ್ನು ಕೇಳಿದರೆ 72 ಗಂಟೆಯೊಳಗಾಗಿ ಈ ಸಂಸ್ಥೆಗಳು ಪೂರೈಸಬೇಕಾಗುತ್ತದೆ.