ನವದೆಹಲಿ: ಈ ವರ್ಷ ಖಾಸಗಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಈ ವರ್ಷ ವೇತನ ಶೇಕಡ 9.8 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಜಾಗತಿಕ ಆರ್ಥಿಕ ಬಿಕಟ್ಟಿನಿಂದ 2023ರಲ್ಲಿ ಕಾರ್ಪೊರೇಟ್ ವಲಯದಲ್ಲಿ ಅನೇಕ ಸವಾಲುಗಳು ಎದುರಾಗಿದ್ದರೂ ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಖಾಸಗಿ ಉದ್ಯೋಗಿಗಳ ವೇತನ ಏರಿಕೆಯಾಗಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಕಾರ್ನ್ ಪೆರ್ರಿ ಸಮೀಕ್ಷೆಯ ಪ್ರಕಾರ, ಈ ವರ್ಷ ಉದ್ಯೋಗಿಗಳ ವೇತನ ಸರಾಸರಿ ಶೇಕಡ 9.8 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಪ್ರತಿಭಾನುವಂತ ಉದ್ಯೋಗಿಗಳಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವೇತನ ಏರಿಕೆಯಾಗಬಹುದು. ಪ್ರತಿಭಾವಂತ ಉದ್ಯೋಗಿಗಳು ಕಂಪನಿ ಬಿಟ್ಟು ಹೋಗದಂತೆ ನೋಡಿಕೊಳ್ಳಲು ಕಂಪನಿಗಳು ಗಮನಹರಿಸುತ್ತಿದ್ದು, ಹೀಗಾಗಿ ಉದ್ಯೋಗಿಗಳಿಗೆ ಹೆಚ್ಚಿನ ವೇತನ, ಭಡ್ತಿ ನೀಡಲು ಮುಂದಾಗಿವೆ.
ಜೀವ ವಿಜ್ಞಾನ ಮತ್ತು ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಶೇಕಡ 10.2, ಉನ್ನತ ತಂತ್ರಜ್ಞಾನ ವಲಯದಲ್ಲಿ ಶೇಕಡ 10.4, ವಾಹನ ಕ್ಷೇತ್ರದಲ್ಲಿ ಶೇಕಡ 9, ಕೆಮಿಕಲ್ಸ್ ವಲಯದಲ್ಲಿ ಶೇಕಡ 9.6, ಗ್ರಾಹಕ ಸರಕಗಳು ಶೇಕಡ 9.8 ಹಾಗೂ ಚಿಲ್ಲರೆ ವ್ಯಾಪಾರದಲ್ಲಿ ಶೇಕಡ 9 ರಷ್ಟು ವೇತನ ಏರಿಕೆಯಾಗಬಹುದು.
2020ರ ಕೊರೋನಾ ಸಂದರ್ಭದಲ್ಲಿ ಉದ್ಯೋಗಿಗಳ ಸರಾಸರಿ ವೇತನ ಶೇಕಡ 8.6 ರಷ್ಟು ಏರಿಕೆ ಮಾಡಲಾಗಿತ್ತು. 2022 ರಲ್ಲಿ ಶೇಕಡ 9.4 ರಷ್ಟು ವೇತನ ಏರಿಕೆಯಾಗಿದ್ದು, 2023ರಲ್ಲಿ ಸರಾಸರಿ ವೇತನ ಶೇಕಡ ಶೇಕಡ 9.8ರಷ್ಟು ಹೆಚ್ಚಳವಾಗಬಹುದು. ಜಾಗತಿಕವಾಗಿ ಆರ್ಥಿಕ ಹಿಂಜರಿತ ಮತ್ತು ಆರ್ಥಿಕ ಬಿಕಟ್ಟಿನ ಬಗ್ಗೆ ಚರ್ಚೆ ನಡೆಯುತ್ತಿದೆ. ಭಾರತದ ಆರ್ಥಿಕತೆಯ ಬಗ್ಗೆ ಸಕಾರಾತ್ಮಕ ಚಿಂತನೆ ಇದ್ದು, ಜೆಡಿಪಿ ಶೇಕಡ 6 ಕ್ಕಿಂತ ಹೆಚ್ಚಾಗಿರಲಿದೆ ಎಂದು ಅಂದಾಜಿಸಲಾಗಿದೆ. ಪ್ರತಿಭಾವಂತರ ವೇತನದಲ್ಲಿ ಶೇಕಡ 15 ರಿಂದ 30 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.