ಖಠ್ಮಂಡು: ಭಾರತದ ಕರಾವಳಿಯಲ್ಲಿ ರೈಲು ಓಡಿಸುವ ಕೊಂಕಣ ರೈಲ್ವೆ ಕಾರ್ಪೊರೇಶನ್ ನೇಪಾಳ ರೈಲ್ವೆ ಇಲಾಖೆಗೆ ಶುಕ್ರವಾರ ಎರಡು ಅತ್ಯಾಧುನಿಕ ಡೀಸೆಲ್ ಇಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (ಡಿಇಎಂಯು) ರೈಲುಗಳನ್ನು ಹಸ್ತಾಂತರಿಸಿದೆ. ಆ ರೈಲುಗಳು ಭಾರತದ ಬಿಹಾರದ ಜಯನಗರ ಹಾಗೂ ನೇಪಾಳ ದೇಶದ ಧನುಷಾ ಜಿಲ್ಲೆಯ ಕುರ್ತಾ ನಡುವೆ ಡಿಸೆಂಬರ್‌ನಿಂದ ಸಂಚಾರ ಆರಂಭಿಸಲಿದೆ.
ಹಿಮಾಲಯದ ತಪ್ಪಲಿನಲ್ಲಿರುವ ನೇಪಾಳ ದೇಶದ ಮೊದಲ ಬ್ರಾಡ್ ಗೇಜ್ ರೈಲು ಇದಾಗಿದ್ದು, ನೇಪಾಳದ ರೈಲ್ವೆ ಸಿಬ್ಬಂದಿ ರೈಲನ್ನು ಸ್ವಾಗತಿಸಿದರು. ಹೊಸ ರೈಲನ್ನು ನೋಡಲು ಕೊರೊನಾ ಮಾರಿಯ ಭಯವನ್ನೂ ಮರೆತು ಸಾವಿರಾರು ಜನ ಸೇರಿದ್ದರು. ಒಟ್ಟು 35 ಕಿಮೀ ವ್ಯಾಪ್ತಿಯಲ್ಲಿ ಸಂಚರಿಸಲಿರುವ ಈ ರೈಲ್ವೆಯಿಂದ ಹಲವರಿಗೆ ಅನುಕೂಲವಾಗಲಿದೆ. ಕಳೆದ ವರ್ಷವೇ ಬ್ರಾಡ್ ಗೇಜ್ ಹಳಿ ನಿರ್ಮಾಣ ಕಾರ್ಯ ಮುಕ್ತಾಯವಾಗಿದೆ. ಶುಕ್ರವಾರದಿಂದ ರೈಲುಗಳು ಪರೀಕ್ಷಾರ್ಥ ಓಡಾಟ ಪ್ರಾರಂಭವಾಗಿದೆ ಎಂದು ನೇಪಾಳ ರೈಲ್ವೆ ಕಂಪನಿ ನಿರ್ದೇಶಕ ಗುರು ಭಟ್ಟಾರಿಯಾ ತಿಳಿಸಿದ್ದಾರೆ.
ಜಯನಗರ ಕುರ್ತಾ ನಡುವಿನ ರೈಲ್ವೆ ಮಾರ್ಗವನ್ನು ಬ್ರಿಟಿಷರ ಕಾಲದಲ್ಲೇ ಅಲ್ಲಿನ ಅರಣ್ಯ ಸಂಪತ್ತನ್ನು ಭಾರತಕ್ಕೆ ತರಲು ನಿರ್ಮಾಣ ಮಾಡಲಾಗಿತ್ತು. ಆದರೆ, ನಂತರ ಅದು ಬ್ರಾಡ್ ಗೇಜ್‌ಗೆ ಪತಿವರ್ತನೆಯಾಗಿರಲಿಲ್ಲ. ಈಗ ಕೊರೊನಾ ಕಾರಣ ರೈಲು ವಾಣಿಜ್ಯಿಕ ಸಂಚಾರ ಆರಂಭಿಸುವುದಿಲ್ಲ. ನಿಲ್ದಾಣದಲ್ಲೇ ನಿಂತಿರುತ್ತದೆ. ಡಿಸೆಂಬರ್ ಅಂತ್ಯದ ಹೊತ್ತಿಗೆ ರಾಮ-ಸೀತಾ ವಿವಾಹ ಕಾರ್ಯಕ್ರಮ ಆಚರಣೆ ಸಂದರ್ಭದಲ್ಲಿ ಓಡಿಸಲಾಗುವುದು ಎಂದು ವಿಭಾಗೀಯ ಇಂಜಿನಿಯರ್ ದೇವೇಂದ್ರ ಸಹಾ ತಿಳಿಸಿದ್ದಾರೆ. 2019 ರ ಮೇ ತಿಂಗಳಿನಲ್ಲಿ ರೈಲ್ವೆ ನಿರ್ಮಾಣ ಸಂಬಂಧ ನೇಪಾಳ ರೈಲ್ವೆ ಕಂಪನಿ ಜತೆ ಕೊಂಕಣ ರೈಲ್ವೆ ಒಪ್ಪಂದ ಮಾಡಿಕೊಂಡಿತ್ತು. 52.46 ಕೋಟಿ ವೆಚ್ಚದಲ್ಲಿ ಎರಡು ರೈಲುಗಳು ನಿರ್ಮಾಣವಾಗಿದ್ದು, ಎರಡೂ ರೈಲುಗಳು ತಲಾ ಒಂದೊಂದು ಡೀಸೆಲ್ ವಪರ್ ಇಂಜಿನ್, ಡೀಸೆಲ್ ಟ್ರೇಲರ್, ಹಾಗೂ ಮೂರು ಬೋಗಿಗಳನ್ನು ಹೊಂದಿವೆ.