ನವದೆಹಲಿ: ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗುತ್ತಿವೆ. 2021 ರ ಹೊತ್ತಿಗೆ ಭಾರತ ವಿಶ್ವದದಲ್ಲಿ ನವೀಕರಿಸಬಹುದಾದ ಮೂಲದಿಂದ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುವ ದೇಶ ನಮ್ಮದಾಗುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ಹೇಳಿದೆ.
ಸದ್ಯ ವಿಶ್ವದಲ್ಲಿ ಭಾರತ ನವೀಕರಿಸಬಹುದಾದ ಮೂಲದಿಂದ ಇಂಧನ ಉತ್ಪಾದಿಸುವ 5 ನೇ ಅತಿ ದೊಡ್ಡ ರಾಷ್ಟ್ರವಾಗಿದೆ. ಪವನ ಶಕ್ತಿಯಲ್ಲಿ 4 ನೇ ಅತಿ ದೊಡ್ಡ ಉತ್ಪಾದಕ, ಸೋಲಾರ್ ನಲ್ಲಿ ವಿಶ್ವದ ಮೂರನೇ ಅತಿ ದೊಡ್ಡ ಉತ್ಪಾದಕ ದೇಶವಾಗಿವೆ. ಚೀನಾ ಹಾಗೂ ಅಮೆರಿಕಾಗಳು ಮೊದಲ ಎರಡು ಸ್ಥಾನದಲ್ಲಿವೆ.
2022 ರ ಹೊತ್ತಿಗೆ 175 ಜಿಗಾ ವ್ಯಾಟ್ ನಷ್ಟು ನವೀಕರಿಸಬಹುದಾದ ಮೂಲಗಳಿಂದ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಭಾರತ ಹೊಂದಿದೆ. ಸದ್ಯ ದೇಶದಲ್ಲಿ ಶೇ.35 ರಷ್ಟು ವಿದ್ಯುತ್ ನ್ನು ನವೀಕರಿಸಬಹುದಾದ ಇಂಧನದ ಮೂಲದಿಂದ ಪಡೆಯಲಾಗುತ್ತಿದೆ. ಅದರಲ್ಲಿ ಸೋಲಾರ್ ಪಾಲು ಅತಿ ಹೆಚ್ಚು.
ಐಇಎ ಮಾಹಿತಿ ಪ್ರಕಾರ ನವೀಕರಿಸಬಹುದಾದ ಇಂಧನ ಕ್ಷೇತ್ರವು ಕೋವಿಡ್ ನಲ್ಲಿ ಅತಿ ಕಡಿಮೆ ಬಾಧಿತ ವಲಯವಾಗಿದೆ. ಭಾರತ 2021 ರ ಹೊತ್ತಿಗೆ ನವೀಕರಿಸಬಹುದಾದ ಮೂಲದಿಂದ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುವ ರಾಷ್ಟ್ರವಾಗುವ ಅವಕಾಶವಿದೆ.
ಆದರೆ, ಅದಕ್ಕೆ ಸರ್ಕಾರದ ನೀತಿಗಳು ಬದಲಾಗಬೇಕಿದೆ. ಭೂ ಸ್ವಾಧೀನ ಸಮಸ್ಯೆ, ಸರ್ಕಾರದ ಸಬ್ಸಿಡಿ ವಿಳಂಬ, ವಿವಿಧ ಅನುಮತಿಗಳ ವಿಳಂಬ ಮುಂತಾದ ತೊಡಕುಗಳು ನಿವಾರಣೆಯಾಗಬೇಕಿದೆ.