ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ 75 ವರ್ಷ ಮೇಲ್ಪಟ್ಟವರ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದಾರೆ. ನಿರ್ಮಲಾ ಸೀತಾರಾಮನ್ ಘೋಷಣೆ ನಂತ್ರ ಈ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಇದ್ರ ಷರತ್ತಿನ ಬಗ್ಗೆ ತಿಳಿಯುವ ಅಗತ್ಯವಿದೆ.
75 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವೃದ್ಧರ ಕಾನೂನು ತೊಂದರೆಗಳನ್ನು ಕಡಿಮೆ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಪಿಂಚಣಿ ಮತ್ತು ಬಡ್ಡಿಯಿಂದ ಮಾತ್ರ ಆದಾಯ ಹೊಂದಿರುವ ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಲ್ಲಿ ವಿನಾಯಿತಿ ನೀಡುವುದಾಗಿ ಹೇಳಿದ್ದಾರೆ. ಪಿಂಚಣಿ ಅಥವಾ ಬಡ್ಡಿಯಿಂದ ಮಾತ್ರ ಆದಾಯ ಪಡೆಯುವ ವೃದ್ಧರು ಆದಾಯ ತೆರಿಗೆ ಸಲ್ಲಿಸುವ ಅವಶ್ಯಕತೆಯಿಲ್ಲ. ಅವ್ರು ಹೊಂದಿರುವ ಖಾತೆಯಿಂದ ತೆರಿಗೆ ಸ್ವಯಂಚಾಲಿತವಾಗಿ ಕಡಿತಗೊಳ್ಳಲಿದೆ.
ವಾಸ್ತವವಾಗಿ ತೆರಿಗೆ ಪಾವತಿಸಲು ವಿನಾಯಿತಿ ಸಿಕ್ಕಿಲ್ಲ. ರಿಟರ್ನ್ಸ್ ಸಲ್ಲಿಸುವ ವಿಧಾನದಲ್ಲಿ ಮಾತ್ರ ವಿನಾಯಿತಿ ಸಿಗಲಿದೆ. ಹಿರಿಯ ನಾಗರಿಕರ ಆದಾಯ ಕೇವಲ ಪಿಂಚಣಿ ಹಾಗೂ ಬಡ್ಡಿಯನ್ನು ಆಧರಿಸಿದ್ದರೆ ಮಾತ್ರ ಇದು ಅನ್ವಯವಾಗಲಿದೆ.
ಎರಡನೇ ಷರತ್ತು ಅಂದ್ರೆ ಈ ವಿನಾಯಿತಿ ಪಡೆಯಲು, ಪಿಂಚಣಿ ಖಾತೆ ಮತ್ತು ಸ್ಥಿರ ಠೇವಣಿ ಒಂದೇ ಬ್ಯಾಂಕಿನಲ್ಲಿರಬೇಕು.
ಎರಡು ಅಥವಾ ಎರಡಕ್ಕಿಂತ ಹೆಚ್ಚು ಖಾತೆಯಲ್ಲಿ ಸ್ಥಿರ ಠೇವಣಿ ಹೊಂದಿರುವ ಹಿರಿಯ ನಾಗರಿಕರಿಗೆ ಈ ವಿನಾಯಿತಿ ಅನ್ವಯವಾಗುವುದಿಲ್ಲ. ಅಂಚೆ ಕಚೇರಿ ಠೇವಣಿ ಹಾಗೂ ಬೇರೆ ಸ್ಥಿರ ಠೇವಣಿಯಿಂದ ಆದಾಯ ಬರ್ತಿದ್ದರೆ ಅವರು ಕೂಡ ಇದ್ರಿಂದ ವಿನಾಯಿತಿ ಪಡೆಯುವುದಿಲ್ಲ.
ಮ್ಯೂಚುವಲ್ ಫಂಡ್, ಷೇರುಗಳು, ವಿಮಾ ಯೋಜನೆಗಳಿಂದ ಆದಾಯ ಗಳಿಸುವ ಹಿರಿಯ ನಾಗರಿಕರಿಗೆ ರಿಟರ್ನ್ಸ್ ಸಲ್ಲಿಸುವುದರಿಂದ ವಿನಾಯಿತಿ ನೀಡಲಾಗುವುದಿಲ್ಲ.
ಈ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ಆದಾಯ ತೆರಿಗೆ ಇಲಾಖೆಯಿಂದ ಹೆಚ್ಚಿನ ಸ್ಪಷ್ಟೀಕರಣದ ಅಗತ್ಯವಿದೆ ಎಂದು ತಜ್ಞರು ಹೇಳುತ್ತಾರೆ. ಆದಾಯ ತೆರಿಗೆ ರಿಟರ್ನ್ಸ್ ನಿಂದ ರಿಯಾಯಿತಿ ಸಿಕ್ಕಿಲ್ಲ. ಹಾಗಾಗಿ 75 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವೃದ್ಧರು ರಿಟರ್ನ್ಸ್ ಸಲ್ಲಿಸುವುದು ಉತ್ತಮ. ಐಟಿಆರ್ ಸಲ್ಲಿಸಲು ಸಿಎ ಹೊಂದಿದ್ದರೆ ಯಾವುದೇ ಚಿಂತೆಯಿಲ್ಲದೆ ಐಟಿಆರ್ ಸಲ್ಲಿಸಿ.