ನವದೆಹಲಿ: ಕೇಂದ್ರ ಸರ್ಕಾರ ಸಾಮಾಜಿಕ ಭದ್ರತಾ ಯೋಜನೆಯಡಿ ಜಾರಿಗೆ ತಂದ ಅಟಲ್ ಪಿಂಚಣಿ ಯೋಜನೆಗೆ ಅಕ್ಟೋಬರ್ 1 ರಿಂದ ಆದಾಯ ತೆರಿಗೆ ಪಾವತಿಸುವ ನಾಗರೀಕರು ನೋಂದಣಿ ಮಾಡಿಕೊಳ್ಳುವಂತಿಲ್ಲ.
ತೆರಿಗೆ ಪಾವತಿಸುವವರಿಗೆ ಪಿಂಚಣಿ ಯೋಜನೆ ರದ್ದು ಪಡಿಸಲಾಗಿದ್ದು, ಅಕ್ಟೋಬರ್ 1 ರಿಂದ ಅಟಲ್ ಪಿಂಚಣಿ ಯೋಜನೆಗೆ ಹೊಸ ನಿಯಮ ಜಾರಿಗೆ ಬರಲಿದೆ. ಈ ಕುರಿತಾಗಿ ಕೇಂದ್ರ ಹಣಕಾಸು ಇಲಾಖೆಯಿಂದ ಅಧಿಸೂಚನೆ ಪ್ರಕಟಿಸಲಾಗಿದೆ.
ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗಾಗಿ 2015 ರ ಜೂನ್ 1 ರಂದು ಪಿಂಚಣಿ ನೀಡಲು ಅಟಲ್ ಪಿಂಚಣಿ ಯೋಜನೆಯನ್ನು ಪರಿಚಯಿಸಲಾಗಿತ್ತು. 60 ವರ್ಷ ಮೇಲ್ಪಟ್ಟವರಿಗೆ ಕಾರ್ಮಿಕರ ಪಾಲಿನ ಕೊಡುಗೆ ಆಧರಿಸಿ ಕನಿಷ್ಠ 1 ಸಾವಿರದಿಂದ 5000 ರೂ.ವರೆಗೆ ಪಿಂಚಣಿ ನೀಡಲಾಗುವುದು.
ಆದಾಯ ತೆರಿಗೆ ಪಾವತಿಸುವ ಯಾವುದೇ ನಾಗರೀಕರು ಈ ಯೋಜನೆಗೆ ಸೇರಲು ಅರ್ಹರಾಗಿರುವುದಿಲ್ಲ ಎಂದು ಹೊಸ ಅಧಿಸೂಚನೆ ಹೊರಡಿಸಲಾಗಿದೆ. ಅಕ್ಟೋಬರ್ 1 ಕ್ಕಿಂತ ಮೊದಲು ಯೋಜನೆಗೆ ನೋಂದಣಿ ಮಾಡಿಕೊಂಡ ನಾಗರಿಕರಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಈ ಯೋಜನೆಯಡಿ 18 ರಿಂದ 40 ವರ್ಷದೊಳಗಿನ ನಾಗರಿಕರು ಯಾವುದೇ ಬ್ಯಾಂಕ್ ಅಥವಾ ಅಂಚೆಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯುವ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಅಸಂಘಟಿತ ವಾಲಯದ ಕಾರ್ಮಿಕರು ಪಿಂಚಣಿ ಯೋಜನೆಗೆ ಸೇರಬಹುದು. ಅವರ ವಾರ್ಷಿಕ ಹೂಡಿಕೆಯ ಶೇಕಡ 50ರಷ್ಟು ಪಾಲಿನ ಹಣವನ್ನು ಅಥವಾ 1000 ರೂ.ವರೆಗೆ ಕೇಂದ್ರ ಸರ್ಕಾರದ ಕೊಡುಗೆಯಾಗಿ ನೀಡಲಾಗುವುದು.
ಕಳೆದ ಹಣಕಾಸು ವರ್ಷದಲ್ಲಿ 99 ಲಕ್ಷಕ್ಕೂ ಹೆಚ್ಚು ಎಪಿವೈ ಖಾತೆಗಳನ್ನು ತೆರೆಯಲಾಗಿದ್ದು, ಮಾರ್ಚ್ 2022 ರ ಅಂತ್ಯದ ವೇಳೆಗೆ ಒಟ್ಟು ಚಂದಾದಾರರ ಸಂಖ್ಯೆಯನ್ನು 4.01 ಕೋಟಿಗೆ ಏರಿಕೆಯಾಗಿದೆ. ಭಾರತವು ಪ್ರಸ್ತುತ ಸುಮಾರು 8.22 ಕೋಟಿ ಐಟಿ ಪಾವತಿದಾರರನ್ನು ಹೊಂದಿದೆ. ಐಟಿ ಕಾನೂನಿನಡಿಯಲ್ಲಿ, 2.5 ಲಕ್ಷದವರೆಗಿನ ಆದಾಯ ಹೊಂದಿರುವ ಜನರು ತೆರಿಗೆಯಿಂದ ವಿನಾಯಿತಿ ಹೊಂದಿದ್ದಾರೆ.