
ನವದೆಹಲಿ: ಆದಾಯ ತೆರಿಗೆ ಮಾಹಿತಿ ನೀಡುವ ಸಂದರ್ಭದಲ್ಲಿ ನಕಲಿ ದಾಖಲೆ ಸಲ್ಲಿಸಿ ಹೆಚ್ಚಿನ ವಿನಾಯಿತಿ ಪಡೆಯುತ್ತಿರುವವರನ್ನು ಆದಾಯ ತೆರಿಗೆ ಇಲಾಖೆ ಪತ್ತೆ ಮಾಡಿ ಅಂತಹವರಿಗೆ ನೋಟಿಸ್ ಜಾರಿ ಮಾಡಿದೆ.
ವೇತನ ವರ್ಗದ ಆದಾಯ ತೆರಿಗೆ ಪಾವತಿದಾರರು ಈ ಹಿಂದೆ ಆದಾಯ ತೆರಿಗೆ ಇಲಾಖೆಯನ್ನು ಸುಲಭವಾಗಿ ವಂಚಿಸಬಹುದಾಗಿತ್ತು. ಈಗ ತೆರಿಗೆ ಇಲಾಖೆಯಿಂದ ಸುಧಾರಿತ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದ್ದು, ತೆರಿಗೆ ವಂಚಕರನ್ನು ಸುಲಭವಾಗಿ ಪತ್ತೆ ಮಾಡಿ ಅಂತಹ ವಂಚಕರಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.
ತೆರಿಗೆ ತಜ್ಞರ ಹೆಚ್ಚಿನ ರೀಫಂಡ್ ಭರವಸೆ ಹಿನ್ನೆಲೆಯಲ್ಲಿ ವೇತನ ವರ್ಗದ ತೆರಿಗೆದಾರರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಲ್ಲಿಸುತ್ತಿದ್ದರು. ಗೃಹ ಸಾಲ, ಬಂಧುಗಳಿಂದ ನಕಲಿ ಪಾವತಿ ರಸೀದಿ, ನಕಲಿ ದೇಣಿಗೆ ದಾಖಲೆ ಸಲ್ಲಿಸುತ್ತಿದ್ದರು. ಹೊಸ ತಂತ್ರಜ್ಞಾನ ಬಳಸಿಕೊಂಡು ಕಳೆದ 10 ವರ್ಷದಲ್ಲಿ 50 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಹೊಂದಿದವರ ಎಲ್ಲಾ ದಾಖಲೆಗಳನ್ನು ತಾಳೆ ಹಾಕುವುದು ಆದಾಯ ತೆರಿಗೆಗೆ ಸುಲಭವಾಗಿದೆ. ರಾಜಕೀಯ ಪಕ್ಷಗಳಿಗೆ ನೀಡಿದ ದೇಣಿಗೆ ಮಾಹಿತಿ ಕೂಡ ಆದಾಯ ತೆರಿಗೆ ಇಲಾಖೆಗೆ ಲಭ್ಯವಿದ್ದು, ಯಾವುದೇ ಸಣ್ಣ ಸುಳ್ಳು ಮಾಹಿತಿ ಕೂಡ ಪತ್ತೆಯಾಗಬಲ್ಲದು. ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ವೇತನ ವರ್ಗದ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆಯಿಂದ ಸೂಕ್ತ ದಾಖಲೆ ಒದಗಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೇಳಲಾಗಿದೆ.