ದೇಶದ ಅತಿದೊಡ್ಡ ಕಾರ್ಪೊರೇಟ್ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಿದೆ. ಟಾಟಾ ಸನ್ಸ್ ಗೆ ಸುಪ್ರೀಂ ಕೋರ್ಟ್ ನೆಮ್ಮದಿ ನೀಡಿದೆ. 2016 ರಲ್ಲಿ ಸೈರಸ್ ಮಿಸ್ತ್ರಿ ಅವರನ್ನು ಕಾರ್ಯನಿರ್ವಾಹಕ ಅಧ್ಯಕ್ಷರ ಹುದ್ದೆಯಿಂದ ತೆಗೆದುಹಾಕಿದ ನಿರ್ಧಾರ ಸರಿಯಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸೈರಸ್ ಮಿಸ್ತ್ರಿ ಅವರನ್ನು ದೇಶದ ಅತ್ಯಂತ ಹಳೆಯ ಮತ್ತು ಅತಿ ದೊಡ್ಡ ಸಂಸ್ಥೆಯಾದ ಟಾಟಾ ಸನ್ಸ್ ನ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ 2012ರಲ್ಲಿ ನೇಮಕ ಮಾಡಲಾಗಿತ್ತು. ನಾಲ್ಕು ವರ್ಷಗಳ ನಂತ್ರ ಅಂದ್ರೆ 2016ರಲ್ಲಿ ನಡೆದ ಟಾಟಾ ಸನ್ಸ್ ಮಂಡಳಿಯ ಸಭೆಯಲ್ಲಿ ಮಿಸ್ತ್ರಿ ಅವರನ್ನು ಹುದ್ದೆಯಿಂದ ತೆಗೆದು ಹಾಕಲಾಗಿತ್ತು.
ಇದೊಂದು ಸಂಚು. ಕಾರ್ಪೊರೇಟ್ ಆಡಳಿತದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಮಿಸ್ತ್ರಿ ಆರೋಪ ಮಾಡಿದ್ದರು. ಈ ನಿರ್ಧಾರದ ವಿರುದ್ಧ ಸೈರಸ್ ಮಿಸ್ತ್ರಿ ಕಂಪೆನಿ ಕಾನೂನು ನ್ಯಾಯಮಂಡಳಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಯಾವ ಸಮಯದಲ್ಲಾದರೂ ಅಧ್ಯಕ್ಷರನ್ನು ತೆಗೆದುಹಾಕುವ ಹಕ್ಕು ಟಾಟಾ ಸನ್ಸ್ ಗೆ ಇದೆ ಎಂದು ಮಿಸ್ತ್ರಿ ಅವರ ಮನವಿಯನ್ನು ನ್ಯಾಯಮಂಡಳಿ ತಿರಸ್ಕರಿಸಿತ್ತು. ಈ ನಿರ್ಧಾರವನ್ನು ಮಿಸ್ತ್ರಿ ಎನ್‌ಸಿಎಲ್‌ಎಟಿಯಲ್ಲಿ ಪ್ರಶ್ನಿಸಿದ್ದರು. 2019 ರ ಡಿಸೆಂಬರ್‌ನಲ್ಲಿ ಸೈರಸ್ ಮಿಸ್ತ್ರಿ ಅವರನ್ನು ಅಧ್ಯಕ್ಷರನ್ನಾಗಿ ತೆಗೆದುಹಾಕುವುದು ಕಾನೂನುಬಾಹಿರ ಎಂದು ಎನ್‌ಸಿಎಲ್‌ಎಟಿ ಹೇಳಿತ್ತು.
ಈ ನಿರ್ಧಾರದ ವಿರುದ್ಧ ಟಾಟಾ ಸನ್ಸ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಕಂಪನಿಯ ನಿರ್ದೇಶಕರ ಮಂಡಳಿಯಲ್ಲಿ ಸೈರಸ್ ಮಿಸ್ತ್ರಿ ಎಲ್ಲ ಸದಸ್ಯರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಆದ್ದರಿಂದ ಸೈರಸ್ ಮಿಸ್ತ್ರಿ ಅವರನ್ನು ಕಂಪನಿಯ ಹಿತದೃಷ್ಟಿಯಿಂದ ಅಧ್ಯಕ್ಷ ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ಟಾಟಾ ಸನ್ಸ್ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.
ಅನೇಕ ವರ್ಷಗಳಿಂದ ಸುಪ್ರೀಂ ಕೋರ್ಟ್ ನಲ್ಲಿದ್ದ ಈ ಪ್ರಕರಣವನ್ನು ಶೀಘ್ರವೇ ಇತ್ಯರ್ಥಗೊಳಿಸುವಂತೆ ಟಾಟಾ ಸನ್ಸ್ ಹಾಗೂ ಸೈರನ್ ಮಿಸ್ತ್ರಿ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ನ್ಯಾಯಪೀಠವು ಶುಕ್ರವಾರ ಪ್ರಕರಣದ ತೀರ್ಪು ಪ್ರಕಟಿಸಿದೆ. ಡಿಸೆಂಬರ್ 17ರಂದು ವಿಚಾರಣೆ ಪೂರ್ಣಗೊಳಿಸಿದ್ದ ಪೀಠ,ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು.