
ನವದೆಹಲಿ: ವಿದೇಶದಿಂದ ಆಮದು ಮಾಡಿಕೊಳ್ಳುವ ಎಲೆಕ್ಟ್ರಿಕ್ ವಾಹನಗಳ ಮೇಲಿನ ಆಮದು ಸುಂಕ ಕಡಿತ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಎಲಾನ್ ಮಸ್ಕ್ ಮಾಲೀಕತ್ವದ ಕಾರ್ ತಯಾರಿಕಾ ಕಂಪನಿ ಟೆಸ್ಲಾ ಎಲೆಕ್ಟ್ರಿಕ್ ವಾಹನಗಳನ್ನು ಭಾರತಕ್ಕೆ ಕಳುಹಿಸಲು ಮತ್ತು ಭಾರತದಲ್ಲಿ ಕಾರು ಉತ್ಪಾದನಾ ಘಟಕ ಆರಂಭಿಸಲು ವಿನಾಯಿತಿ ಕೋರಿದೆ. ಆದರೆ, ಕೇಂದ್ರ ಸರ್ಕಾರ ಈ ಬೇಡಿಕೆಯನ್ನು ತಿರಸ್ಕರಿಸಿದ್ದು, ಇತ್ತೀಚೆಗೆ ಟೆಸ್ಲಾ ವತಿಯಿಂದ ಮತ್ತೊಮ್ಮೆ ಹೊಸದಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಆಮದು ನೀತಿ ಪರಿಷ್ಕರಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿತ್ತು. ಕೇಂದ್ರ ಸರ್ಕಾರ ಹೊಸ ಎಲೆಕ್ಟ್ರಿಕ್ ವಾಹನ ನೀತಿ ಪರಿಚಯಿಸಲು ಸಿದ್ಧತೆ ನಡೆಸಿದೆ. ಆಮದು ಸುಂಕ ವಿನಾಯಿತಿ ನೀಡಲಿದ್ದು, ವಿದೇಶದಿಂದ ಭಾರತಕ್ಕೆ ಆಮದಾಗುವ ಎಲೆಕ್ಟ್ರಿಕ್ ವಾಹನಗಳ ದರ ಕಡಿಮೆಯಾಗಲಿದೆ ಎನ್ನಲಾಗಿತ್ತು. ಆದರೆ, ಇದನ್ನು ಅಲ್ಲಗಳೆದ ನಿರ್ಮಲಾ ಸೀತಾರಾಮನ್, ವಿದೇಶದಿಂದ ಆಮದಾಗುವ ಎಲೆಕ್ಟ್ರಿಕ್ ವಾಹನಗಳ ಮೇಲಿನ ಆಮದು ಸುಂಕ ಕಡಿತಗೊಳಿಸುವ ಯಾವುದೇ ಪ್ರಸ್ತಾವನೆ ಸದ್ಯಕ್ಕಿಲ್ಲ ಎಂದು ಹೇಳಿದ್ದಾರೆ.