ಬೆಂಗಳೂರು: ಖಾಸಗಿ ಸಂಸ್ಥೆಗಳ ಉದ್ಯೋಗಿಗಳ ಗ್ರಾಚ್ಯುಟಿ ಮೊತ್ತಕ್ಕೆ ವಿಮೆ ರಕ್ಷಣೆ ಒದಗಿಸಲು ಕೇಂದ್ರ ಸರ್ಕಾರ ಕಾಯ್ದೆಗೆ ತಿದ್ದುಪಡಿ ಮಾಡಿದ 25 ವರ್ಷಗಳ ನಂತರ ರಾಜ್ಯದಲ್ಲಿ ಅನುಷ್ಠಾನಕ್ಕೆ ಬಂದಿದೆ.
ಕಾರ್ಮಿಕ ಇಲಾಖೆ ರಾಜ್ಯಪತ್ರದ ಮೂಲಕ ಕರ್ನಾಟಕ ಕಡ್ಡಾಯ ಗ್ರಾಚ್ಯುಟಿ ವಿಮಾ ನಿಯಮಗಳು -2024 ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿದೆ. ಖಾಸಗಿ ಉದ್ದಿಮೆಗಳು, ಉದ್ಯೋಗದಾತ ಸಂಸ್ಥೆಗಳು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದರೂ ನೌಕರರ ಗ್ರಾಚ್ಯುಟಿಗೆ ರಕ್ಷಣೆ ಸಿಗುತ್ತದೆ.
ಆರ್ಥಿಕ ಬಿಕ್ಕಟ್ಟು ಸೇರಿ ಅನೇಕ ಕಾರಣಗಳಿಂದ ಉದ್ದಿಮೆಗಳು, ಇತರೆ ಉದ್ಯೋಗ ಸಂಸ್ಥೆಗಳು ಬಾಗಿಲು ಮುಚ್ಚಿದಾಗ ನೌಕರರ ವಿಮಾ ಮೊತ್ತಕ್ಕೆ ರಕ್ಷಣೆ ಸಿಗುತ್ತಿರಲಿಲ್ಲ. ಇಂತಹ ಸಂದರ್ಭಗಳಲ್ಲಿ ನೌಕರರು ಗ್ರಾಚ್ಯುಟಿಯಿಂದ ವಂಚಿತರಾಗುತ್ತಿದ್ದರು. ಇಂತಹ ನೌಕರರನ್ನು ರಕ್ಷಿಸಲು ಕೇಂದ್ರ ಸರ್ಕಾರ ಗ್ರಾಚ್ಯುಟಿ ಮೊತ್ತಕ್ಕೆ ವಿಮೆ ರಕ್ಷಣೆ ಒದಗಿಸುವುದನ್ನು ಕಡ್ಡಾಯಗೊಳಿಸಿತ್ತು. ಆದರೆ ರಾಜ್ಯ ಸರ್ಕಾರ ನಿಯಮಗಳನ್ನು ರೂಪಿಸಿರಲಿಲ್ಲ. ಈಗ ನಿಯಮಗಳನ್ನು ಜಾರಿಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ.