ನ್ಯೂಯಾರ್ಕ್: ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್ ನೂತನವಾಗಿ ಭಾರತೀಯ ಮೂಲದವರಾದ ಪರಾಗ್ ಅಗರವಾಲ್ ನೇಮಕವಾಗಿದ್ದಾರೆ.
ಟ್ವಿಟರ್ ಸಂಸ್ಥಾಪಕ ಮತ್ತು ಸಿಇಓ ಜಾಕ್ ಡೋರ್ಸಿ ಪದತ್ಯಾಗ ಮಾಡಿದ್ದಾರೆ. ಡೋರ್ಸಿ ಪದತ್ಯಾಗದ ನಂತರ ಪರಾಗ್ ಅಗರವಾಲ್ ಅವರನ್ನು ನೇಮಿಸಲಾಗಿದೆ. ಸೋಮವಾರದಿಂದಲೇ ಜಾರಿಗೆ ಬರುವಂತೆ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಇದು ನನಗೆ ಸಿಕ್ಕ ಗೌರವ ಆಗಿದ್ದು, ಇದಕ್ಕಾಗಿ ಡೋರ್ಸಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
2006 ರಲ್ಲಿ ಆರಂಭವಾದ ಟ್ವಿಟರ್ ಜನಪ್ರಿಯ ಜಾಲತಾಣವಾಗಿದ್ದು, 33 ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿದ್ದು, ವಾರ್ಷಿಕ 28 ಸಾವಿರ ಕೋಟಿ ರೂಪಾಯಿ ಆದಾಯವನ್ನು ಹೊಂದಿದೆ.
ಭಾರತ ಮೂಲದ ಪರಾಗ್ ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಪಡೆದಿದ್ದಾರೆ. ಅಮೆರಿಕದ ಸ್ಯಾನ್ ಫೋರ್ಡ್ ವಿವಿಯಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ತಮ್ಮ ಪಿ.ಹೆಚ್.ಡಿ. ಸಂದರ್ಭದಲ್ಲಿ ಅವರು ಮೈಕ್ರೋಸಾಫ್ಟ್ ಮೊದಲಾದ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.
2011 ರಲ್ಲಿ ಟ್ವಿಟರ್ ಆಡ್ ಇಂಜಿನಿಯರ್ ಆಗಿ ನೇಮಕವಾದ ಅವರು ನಂತರದಲ್ಲಿ ಪದೋನ್ನತಿ ಪಡೆದು 2018ರಲ್ಲಿ ತಂತ್ರಜ್ಞಾನ ವಿಭಾಗದ ಮುಖ್ಯ ಅಧಿಕಾರಿಯಾಗಿ ನೇಮಕವಾಗಿದ್ದರು. ಮರು ವರ್ಷ ಪ್ರಾಜೆಕ್ಟ್ ಬ್ಲೂ ಸ್ಕೈ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಈಗಾಗಲೇ ಗೂಗಲ್ ಸೇರಿದಂತೆ ಹಲವು ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತೀಯ ಮೂಲದವರು ಸಿಇಒ ಆಗಿದ್ದಾರೆ. ಈಗ ಭಾರತಕ್ಕೆ ಮತ್ತೊಂದು ಮತ್ತೊಂದು ಹೆಗ್ಗಳಿಕೆ ಬಂದಿದೆ.
ಸುಂದರ್ ಪಿಚೈ ಗೂಗಲ್ ಸಿಇಒ ಆಗಿದ್ದು, ಇಂದಿರಾ ನೂಯಿ ಅವರು ಪೆಪ್ಸಿಕೋ, ಸತ್ಯ ನಾಡೆಲ್ಲಾ ಮೈಕ್ರೋಸಾಫ್ಟ್ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜೀವ್ ಸೂರಿ -ನೋಕಿಯಾ, ಶಂತನು ನಾರಾಯಣ ಅವರು ಆಡೋಬ್ ಸಿಇಒ, ಸಂಜಯ್ ಝಾ ಅವರು ಗ್ಲೋಬಲ್ ಫೌಂಡರೀಸ್, ಅಜಯ್ ಪಾಲ್ ಸಿಂಗ್ ಭಂಗ ಅವರು ಮಾಸ್ಟರ್ ಕಾರ್ಡ್ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.