ಕೋವಿಡ್-19 ಕಾರಣದಿಂದಾಗಿ ಆರ್ಥಿಕ ಮುಗ್ಗಟ್ಟು ನೆಲೆಸಿರುವ ಕಾರಣ ಸಣ್ಣ ಪುಟ್ಟ ವಹಿವಾಟುಗಳು ಚೇತರಿಸಿಕೊಳ್ಳಲು ಅವಕಾಶ ಕೊಡಲೆಂದು ದಿವಾಳಿ ಮತ್ತು ದಿವಾಳಿತನ ಕಾಯಿದೆಯ (ಐಬಿಸಿ) ನಿಷೇಧಾಜ್ಞೆಯನ್ನು ಮಾರ್ಚ್ 31, 2021ರ ವರೆಗೂ ವಿಸ್ತರಿಸಲಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ದಿವಾಳಿ ಮತ್ತು ದಿವಾಳಿತನ ಕಾನೂನಿನ ಮೇಲಿನ ನಿಷೇಧಾಜ್ಞೆ ಇದೇ ಡಿಸೆಂಬರ್ 25ಕ್ಕೆ ಅಂತ್ಯವಾಗಬೇಕಿತ್ತು. ಇದೀಗ ಈ ಕಾನೂನನ್ನು ಮಾರ್ಚ್ 31ರ ವರೆಗೂ ವಿಸ್ತರಿಸಿರುವ ಕಾರಣ ಉದ್ಯಮಗಳಿಗೆ ಉಸಿರಾಡಲು ಅವಕಾಶ ಕೊಟ್ಟಂತಾಗಿದೆ.
ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾದ ಬಳಿಕ, ಮಾರ್ಚ್ 25ರ ನಂತರದ ಕಾಲಘಟ್ಟದಲ್ಲಿ, ಉದ್ಭವಿಸಿದ ಸಾಲ ಮರುಪಾವತಿ ಹೊರೆಯನ್ನು ಮೇಲ್ಕಂಡ ಕಾಯಿದೆಯ ವ್ಯಾಪ್ತಿಯಿಂದ ಹೊರಗೆ ಇಡಲಾಗುವುದು ಎಂದು ಸೀತಾರಾಮನ್ ತಿಳಿಸಿದ್ದಾರೆ.
ಇದೇ ವೇಳೆ ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳು ತಂತಮ್ಮ ವಹಿವಾಟುಗಳನ್ನು ಅಡಚಣೆಗಳಿಲ್ಲದೇ ನಡೆಸಿಕೊಂಡು ಹೋಗಲು ಅಗತ್ಯವಾದ ಹಣದ ಹರಿವನ್ನು ಖಾತ್ರಿ ಪಡಿಸಿಕೊಳ್ಳಲು ತುರ್ತು ಸಾಲದ ಖಾತ್ರಿ ವ್ಯವಸ್ಥೆಯನ್ನು ಸರ್ಕಾರ ಪೂರೈಸುತ್ತಿರುವುದಾಗಿ ವಿತ್ತ ಸಚಿವರು ಇದೇ ವೇಳೆ ತಿಳಿಸಿದ್ದಾರೆ.