ನವದೆಹಲಿ: ಲಾಕ್ಡೌನ್ ಸಂದರ್ಭದಲ್ಲಿ ಐಟಿ ಇಲಾಖೆ 62, 361 ಕೋಟಿ ರೂಪಾಯಿಗಳನ್ನು 20 ಲಕ್ಷ ತೆರಿಗೆದಾರರಿಗೆ ಮರುಪಾವತಿ ಮಾಡಿದೆ.
19,07,853 ಪ್ರಕರಣಗಳಲ್ಲಿ ವೈಯಕ್ತಿಕ ಆದಾಯ ತೆರಿಗೆದಾರರಿಗೆ 23,453 ಕೋಟಿ ರೂಪಾಯಿ ತೆರಿಗೆ ಮರುಪಾವತಿಸಲಾಗಿದೆ. 1.36 ಲಕ್ಷ ಕಾರ್ಪೊರೆಟ್ ತೆರಿಗೆದಾರರ 38,908 ಕೋಟಿ ರೂಪಾಯಿಗಳನ್ನು ಮರು ಪಾವತಿ ಮಾಡಲಾಗಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ತಿಳಿಸಿದೆ.
ಏಪ್ರಿಲ್ 8 ರಿಂದ ಜೂನ್ 30ರ ವರೆಗಿನ ಅವಧಿಯಲ್ಲಿ 20.44 ಲಕ್ಷ ತೆರಿಗೆದಾರರಿಗೆ ಬಾಕಿ ಇರುವ 62, 361 ಕೋಟಿ ರೂಪಾಯಿಗಳನ್ನು ಸಂದಾಯ ಮಾಡಲಾಗಿದೆ ಎಂದು ಹೇಳಲಾಗಿದೆ.
56 ಕೆಲಸದ ದಿನಗಳಲ್ಲಿ ಪ್ರತಿ ನಿಮಿಷಕ್ಕೆ 76 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ತೆರಿಗೆದಾರರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಮರುಪಾವತಿ ಮಾಡಲಾಗಿದೆ. ಐಟಿ ಇಲಾಖೆಯಿಂದ ಬಂದಿರುವ ಇಮೇಲ್ ಗಳಿಗೆ ತಕ್ಷಣದ ಪ್ರತಿಕ್ರಿಯೆ ನೀಡಿದರೆ ವಿಳಂಬಮಾಡದೆ ಹಣ ಮರುಪಾವತಿ ಮಾಡಲಾಗುವುದು.
ತೆರಿಗೆದಾರರು ತಮ್ಮ ಬಾಕಿ ಇರುವ ಬೇಡಿಕೆ, ಬ್ಯಾಂಕುಗಳ ಖಾತೆ ಸಂಖ್ಯೆ ಮರುಪಾವತಿ ನೀಡುವ ಮೊದಲು ಹೊಂದಾಣಿಕೆಯನ್ನು ಸರಿಪಡಿಸಿದಲ್ಲಿ ಮರುಪಾವತಿ ಪ್ರತಿಕ್ರಿಯೆ ತ್ವರಿತಗೊಳಿಸಲಾಗುವುದು ಎನ್ನಲಾಗಿದೆ.