ನೌಕರರ ಭವಿಷ್ಯವನ್ನು ಭದ್ರಪಡಿಸುವ ಸಲುವಾಗಿ, ವೇತನದ ಕೆಲವು ಭಾಗವನ್ನು ಪಿಎಫ್ ಆಗಿ ಠೇವಣಿ ಇಡಲಾಗುತ್ತದೆ. ಅಗತ್ಯ ಬಿದ್ದರೆ ಅದನ್ನು ಉದ್ಯೋಗಿ ತೆಗೆಯಬಹುದು. ಉದ್ಯೋಗ ಬದಲಿಸಿದರೆ ಪಿಎಫ್ ಖಾತೆಯನ್ನು ವರ್ಗಾಯಿಸಬಹುದು.
ಆದ್ರೆ ಕೆಲವು ಸಂದರ್ಭಗಳಲ್ಲಿ ಕಂಪನಿ ಮುಚ್ಚಿರುತ್ತದೆ. ಆಗ ಪಿಎಫ್ ತೆಗೆಯುವ ಸಮಸ್ಯೆ ಎದುರಾಗುತ್ತದೆ. ಪಿಎಫ್ ಗೆ ಹೆಚ್ ಆರ್ ನೀಡುವ ಕೆಲ ದಾಖಲೆಗಳು ಬೇಕಾಗುತ್ತದೆ. ನೀವು ಕೆಲಸ ಮಾಡ್ತಿರುವ ಕಂಪನಿ ಕೂಡ ಬಾಗಿಲು ಮುಚ್ಚಿದ್ದು, ಪಿಎಫ್ ವಿತ್ ಡ್ರಾ ಬಗ್ಗೆ ಚಿಂತಿಸುತ್ತಿದ್ದರೆ ಇಲ್ಲೊಂದು ಸರಳ ಉಪಾಯವಿದೆ.
ಒಂದು ವೇಳೆ ನಿಮ್ಮ ಕಂಪನಿ ಮುಚ್ಚಿದ್ದರೆ ಪಿಎಫ್ ವಿತ್ ಡ್ರಾಗೆ ಬ್ಯಾಂಕ್ ಸಹಾಯ ಪಡೆಯಬಹುದು. ಇದಕ್ಕೆ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಕೆವೈಸಿ ದಾಖಲೆಗಳ ಆಧಾರದ ಮೇಲೆ ಬ್ಯಾಂಕ್ ಪ್ರಮಾಣೀಕರಿಸುತ್ತದೆ. ನಂತ್ರ ಹಣ ಸಿಗಲಿದೆ. ಇಪಿಎಫ್ಒ ಪ್ರಕಾರ, ಕೆವೈಸಿಗಾಗಿ ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್, ರೇಷನ್ ಕಾರ್ಡ್, ಇಎಸ್ಐ ಗುರುತಿನ ಚೀಟಿ, ಚಾಲನಾ ಪರವಾನಗಿ ಮತ್ತು ಆಧಾರ್ ಕಾರ್ಡ್ ಇತ್ಯಾದಿಗಳ ಫೋಟೋಕಾಪಿ ಮತ್ತು ಮೂಲ ದಾಖಲೆ ನೀಡಬೇಕಾಗುತ್ತದೆ.
ಬ್ಯಾಂಕ್ ನಿಂದ ಅನುಮೋದನೆ ಸಿಕ್ಕ ನಂತ್ರ ಇಪಿಎಫ್ಒ ಅಧಿಕಾರಿಗಳನ್ನು ಸಂಪರ್ಕಿಸಬೇಕಾಗುತ್ತದೆ. ಎಷ್ಟು ಹಳೆಯದು ಮತ್ತು ಯಾವ ಕಾರಣಗಳಿಗಾಗಿ ಖಾತೆಯನ್ನು ಸಕ್ರಿಯಗೊಳಿಸಲಾಗಲಿಲ್ಲ ಇತ್ಯಾದಿ ಮಾಹಿತಿ ನೀಡಬೇಕಾಗುತ್ತದೆ. ಇದನ್ನು ಪರಿಶೀಲಿಸಿದ ನಂತರ ಮತ್ತು ದಾಖಲೆಗಳನ್ನು ಪರಿಶೀಲಿಸಿದ ನಂತ್ರ ಅಧಿಕಾರಿಗಳು ಒಪ್ಪಿಗೆ ನೀಡುತ್ತಾರೆ. ಇದಾದ ಕೆಲವೇ ದಿನಗಳಲ್ಲಿ ಹಣ ಬ್ಯಾಂಕ್ ಖಾತೆಗೆ ಬರುತ್ತದೆ.
ಹಳೆಯ ಕಂಪನಿಯ ಪಿಎಫ್ ಖಾತೆಯನ್ನು ಹೊಸ ಕಂಪನಿಗೆ ವರ್ಗಾಯಿಸದಿದ್ದರೆ ಅಥವಾ ಪಿಎಫ್ ಖಾತೆಯಲ್ಲಿ 36 ತಿಂಗಳವರೆಗೆ ಯಾವುದೇ ವಹಿವಾಟು ಇಲ್ಲದಿದ್ದರೆ, ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಏಳು ವರ್ಷಗಳವರೆಗೆ ಹಣ ವಾಪಸ್ ಪಡೆಯದೆ ಹೋದಲ್ಲಿ ಈ ನಿಧಿಯನ್ನು ಹಿರಿಯ ನಾಗರಿಕ ಕಲ್ಯಾಣ ನಿಧಿಗೆ ವರ್ಗಾಯಿಸಲಾಗುತ್ತದೆ. ನಿಷ್ಕ್ರಿಯಗೊಂಡ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಲು ಇಪಿಎಫ್ಒನಲ್ಲಿ ಅರ್ಜಿ ಸಲ್ಲಿಸಬೇಕು.