ಶ್ರೀಮಂತರಾಗಬೇಕು ಅನ್ನೋ ಆಸೆ ಎಲ್ಲರಲ್ಲೂ ಸಹಜ. ಕೌನ್ ಬನೇಗಾ ಕರೋಡ್ಪತಿಯಂತಹ ಕಾರ್ಯಕ್ರಮಗಳು ಕೋಟ್ಯಾಧಿಪತಿಯಾಗಬೇಕು ಅನ್ನೋ ಆಸೆ ಹುಟ್ಟಿಸುತ್ತವೆ. ಆದ್ರೆ ಕೇವಲ ಹಗಲುಗನಸು ಕಂಡ್ರೆ ಹಣ ಸಂಪಾದಿಸೋದು ಕಷ್ಟ.
ಇದಕ್ಕೆ ಶಿಸ್ತು, ಪರಿಶ್ರಮ, ಹಣಕಾಸು ನಿರ್ವಹಣೆ ಇರಬೇಕು. ಸರಿಯಾಗಿ ಭವಿಷ್ಯದ ಯೋಜನೆ ರೂಪಿಸದೇ ಇದ್ರೆ ಶ್ರೀಮಂತರಾಗೋದು ಅಸಾಧ್ಯ. ಅಷ್ಟೇ ಅಲ್ಲ ಕೆಲವೊಂದು ಕೆಟ್ಟ ಹವ್ಯಾಸಗಳು ಕೂಡ ಕೋಟ್ಯಾಧಿಪತಿಯಾಗುವ ನಮ್ಮ ಆಸೆಗೆ ಅಡ್ಡಿಯಾಗುತ್ತವೆ.
ಅಧಿಕ ಖರ್ಚು : ನೀವೆಷ್ಟು ಸಂಪಾದಿಸುತ್ತೀರಾ ಎನ್ನುವುದಕ್ಕಿಂತ ನೀವು ಎಷ್ಟು ಖರ್ಚು ಮಾಡುತ್ತೀರಾ ಎಂಬುದನ್ನು ಶ್ರೀಮಂತಿಕೆ ಆಧರಿಸಿದೆ. ಲಾಟರಿ ಹೊಡೆದ್ರೂ ಆ ಹಣ ಜಾಸ್ತಿ ದಿನ ಇರುತ್ತೆ ಅಂತಾ ಹೇಳೋದು ಅಸಾಧ್ಯ. ಹಣಕಾಸು ನಿರ್ವಹಣೆ ಕೌಶಲ್ಯ ನಿಮ್ಮನ್ನು ಶ್ರೀಮಂತ ಅಥವಾ ಬಡವನನ್ನಾಗಿಸುವ ಅಸ್ತ್ರ.
ವಿಳಂಬ : ಕೆಲವೊಂದು ಆರ್ಥಿಕ ನಿರ್ಧಾರ ತೆಗೆದುಕೊಳ್ಳಲು ವಿಳಂಬ ಮಾಡುವುದರಿಂದ ನೀವು ಕೋಟ್ಯಾಧಿಪತಿಯಾಗುವ ಅವಕಾಶ ತಪ್ಪಿ ಹೋಗಬಹುದು. ನೀವು ಹಣ ಗಳಿಕೆ ಆರಂಭಿಸಿದ ದಿನದಿಂದ್ಲೇ ಉಳಿತಾಯವನ್ನೂ ಶುರು ಮಾಡಬೇಕು. ನಿಮ್ಮ ಹಣಕಾಸು ಯೋಜನೆಯನ್ನು ನಾಳೆ ನಾಳೆ ಅಂತಾ ಮುಂದೂಡಬೇಡಿ.
ತಪ್ಪು ಆಲೋಚನೆ : ಹಣಕಾಸು ಯೋಜನೆ ಮಾತ್ರ ನಿಮ್ಮನ್ನು ಶ್ರೀಮಂತರನ್ನಾಗಿಸುತ್ತೆ ಅನ್ನೋ ಆಲೋಚನೆ ಕೂಡ ತಪ್ಪು. ನಿಮ್ಮ ದುಡಿಮೆಯಲ್ಲಿ ಇಷ್ಟು ಅಂತಾ ಹಣವನ್ನು ಉಳಿತಾಯಕ್ಕಾಗಿ ಮೀಸಲಾಗಿಡಿ.
ಅದೃಷ್ಟಕ್ಕಾಗಿ ಕಾಯುವುದು : ದಿಢೀರ್ ಅಂತಾ ಶ್ರೀಮಂತರಾಗಬಹುದು ಅನ್ನೋ ಆಸೆ ಎಲ್ಲರಲ್ಲೂ ಸಹಜ. ಲಾಟರಿ ಹೊಡೆಯಬಹುದೇನೋ ಅಂತಾ ಕನಸು ಕಾಣುತ್ತಿರುತ್ತಾರೆ. ನಿಮಗೆ ಅದೃಷ್ಟ ಬರಬಹುದು ಅಂತಾ ಕಾಯುತ್ತ ಕೂರಬೇಡಿ.
ಆಲಸ್ಯ : ಇದು ಕೂಡ ನಿಮ್ಮ ಶ್ರೀಮಂತಿಕೆಯ ಆಸೆಗೆ ಶತ್ರುವಿದ್ದಂತೆ. ಪರಿಶ್ರಮಪಟ್ಟರೆ ಮಾತ್ರ ತಕ್ಕ ಫಲ ಸಿಗುತ್ತದೆ. ಆಲಸ್ಯತನವನ್ನು ಮೆಟ್ಟಿ ನಿಲ್ಲದೇ ಇದ್ರೆ ನೀವು ಶ್ರೀಮಂತರಾಗೋದು ಬಹಳ ಕಷ್ಟ.