ನವದೆಹಲಿ: ಅಗತ್ಯ ವಸ್ತುಗಳ ಜೊತೆಯಲ್ಲಿ ಪೆಟ್ರೋಲ್, ಡೀಸೆಲ್ ದರ ದಿನೇ ದಿನೇ ಏರಿಕೆಯಾಗ್ತಿದೆ. ಔಷಧ ದರ ಕೂಡ ದುಬಾರಿಯಾಗಲಿದೆ. ಇದರೊಂದಿಗೆ ನಿರ್ಮಾಣ ಸಾಮಗ್ರಿಗಳ ವೆಚ್ಚಗಳು ಹೆಚ್ಚುತ್ತಿದ್ದು, ಬಿಲ್ಡರ್ ಗಳು ಏಪ್ರಿಲ್‌ನಲ್ಲಿ ಸುಮಾರು ಶೇ. 10-15 ರಷ್ಟು ದರ ಹೆಚ್ಚಿಸಬಹುದು ಎಂದು ರಿಯಲ್ ಎಸ್ಟೇಟ್ ಸಂಸ್ಥೆ ಕ್ರೆಡೈ-ಎಂಸಿಹೆಚ್‌ಐ, ಕ್ರೆಡೈನ ಮಹಾರಾಷ್ಟ್ರ ಘಟಕ ಹೇಳಿದೆ.
ಕೇಂದ್ರ ಮತ್ತು ರಾಜ್ಯಗಳನ್ನು ಸ್ಟ್ಯಾಂಪ್ ಡ್ಯೂಟಿ, ಸರಕು ಮತ್ತು ಸೇವೆಗಳ(ಜಿಎಸ್‌ಟಿ) ದರಗಳನ್ನು ಕಡಿಮೆ ಮಾಡಲು ಮತ್ತು ಉದ್ಯಮಕ್ಕೆ ಪರಿಹಾರ ನೀಡಲು ಡೆವಲಪರ್ ಗಳಿಗೆ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್(ಐಟಿಸಿ) ಗೆ ಅವಕಾಶ ನೀಡುವಂತೆ ಒತ್ತಾಯಿಸಿದೆ.
ರಿಯಲ್ ಎಸ್ಟೇಟ್ ಮಾರುಕಟ್ಟೆಯು ಬೆಳವಣಿಗೆಯನ್ನು ಕಂಡಿದ್ದರೂ, ಹೆಚ್ಚುತ್ತಿರುವ ನಿರ್ಮಾಣ ವೆಚ್ಚವು ಆ ವೇಗವನ್ನು ಕುಂಠಿತಗೊಳಿಸುತ್ತದೆ ಎಂದು ಕ್ರೆಡೈ-ಎಂಸಿಹೆಚ್‌ಐ ಅಧ್ಯಕ್ಷ ದೀಪಕ್ ಗೊರಾಡಿಯಾ ಸುದ್ದಿಗಾರರಿಗೆ ತಿಳಿಸಿದರು.
ಉಕ್ಕಿನ ಬೆಲೆ ಕೆಜಿಗೆ 35-40 ರೂ.ನಿಂದ 85-90 ರೂ., ಸಿಮೆಂಟ್ ಬೆಲೆ ಮೂಟೆಗೆ ಸುಮಾರು 100 ರೂ., ಇಂಧನ ಮತ್ತು ಸಾರಿಗೆ ವೆಚ್ಚಗಳು ಸಹ ಹೆಚ್ಚಿವೆ. ಒಟ್ಟಾರೆ ನಿರ್ಮಾಣ ವೆಚ್ಚದಲ್ಲಿ 20-25 ಪ್ರತಿಶತದಷ್ಟು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.
ಬೆಲೆಗಳು ಏರುತ್ತಲೇ ಇದ್ದರೆ ಬಿಲ್ಡರ್ ಗಳು ಕೆಲಸವನ್ನು ಸ್ಥಗಿತಗೊಳಿಸಬೇಕಾಗುತ್ತದೆ. ನಿರ್ಮಾಣ, ಕಚ್ಚಾ ವಸ್ತುಗಳ ಖರೀದಿಯನ್ನು ಮುಂದೂಡಬೇಕಾಗುತ್ತದೆ. ಕಳೆದ 45 ದಿನಗಳಲ್ಲಿ ನಿರ್ಮಾಣ ವೆಚ್ಚ ಚದರ ಅಡಿಗೆ 400-500 ರೂ.ಗಳಷ್ಟು ಹೆಚ್ಚಾಗಿದೆ, ಇದು ಕೈಗೆಟುಕುವ ವಸತಿ ವಿಭಾಗ ಮತ್ತು ಮಧ್ಯಮ-ವಿಭಾಗದ ವಸತಿಗಳ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದು ಕಾರ್ಯದರ್ಶಿ ಧವಲ್ ಅಜ್ಮೇರಾ ಹೇಳಿದರು.
ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಹೆಚ್ಚಿದ ಕಚ್ಚಾ ವಸ್ತುಗಳ ಬೆಲೆಗಳ ಏರಿಕೆಯ ಪರಿಣಾಮವನ್ನು ತಗ್ಗಿಸಲು ಮಹಾರಾಷ್ಟ್ರ ಸರ್ಕಾರ ಮುದ್ರಾಂಕ ಶುಲ್ಕವನ್ನು 5-6 ಪ್ರತಿಶತದಿಂದ 3 ಪ್ರತಿಶತದಷ್ಟು ಕಡಿಮೆ ಮಾಡಲು ಪರಿಗಣಿಸಬೇಕು. ಸಿಮೆಂಟ್ ಮತ್ತು ಸ್ಟೀಲ್ ರಫ್ತು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.