ಬೆಂಗಳೂರು: ಹೋಟೆಲ್ ಮಾಲೀಕರ ಸಂಘದಿಂದ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ವಿದ್ಯುತ್ ದರ ಇಳಿಕೆ ಮಾಡುವಂತೆ ಕೋರಿ ಪತ್ರ ಬರೆಯಲಾಗಿದ್ದು, ಈ ಸಂಬಂಧ ಆರು ಅಂಶಗಳ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ವಿದ್ಯುತ್ ದರ ಹೆಚ್ಚಳವನ್ನು ಮುಂದಿನ ಒಂದು ವರ್ಷಕ್ಕೆ ಮುಂದೂಡಬೇಕು. ವಿದ್ಯುತ್ ತೆರಿಗೆಯನ್ನು ಶೇಕಡ 9 ರಿಂದ ಶೇಕಡ 3ಕ್ಕೆ ಇಳಿಕೆ ಮಾಡಬೇಕು. ಟ್ರಾನ್ಸ್ ಮಿಷನ್ ಮತ್ತು ಪೂರೈಕೆಯಲ್ಲಾಗುವ ನಷ್ಟ ಕಡಿಮೆ ಮಾಡಬೇಕು ಎಂದು ಸಲಹೆ ನೀಡಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳು ಉಳಿಸಿಕೊಂಡ ಬಾಕಿಯನ್ನು ಬಡ್ಡಿ ಸಹಿತ ಸಂಗ್ರಹಿಸಬೇಕು. ಪ್ರಿಪೇಯ್ಡ್ ಮೀಟರ್ ಅಳವಡಿಸಿ ಗ್ರಾಹಕರ ಠೇವಣಿ ಹಣ ವಾಪಸ್ ನೀಡಬೇಕು. ಆಡಳಿತದ ಅನಗತ್ಯ ಖರ್ಚು, ವೆಚ್ಚಗಳನ್ನು ಹತೋಟಿಗೆ ತರಬೇಕು ಎಂದು ಹೇಳಲಾಗಿದೆ.
ಈ ಸಲಹೆಗಳನ್ನು ಪರಿಗಣಿಸಿದರೆ ಉದ್ಯಮ, ಇಲಾಖೆಗೆ ಅನುಕೂಲವಾಗಲಿದೆ. ಇಲ್ಲದಿದ್ದರೆ ಹೋಟೆಲ್ ಉದ್ಯಮಕ್ಕೆ ಸಮಸ್ಯೆ ಆಗಲಿದೆ ಎಂದು ಸಚಿವ ಜಾರ್ಜ್ ಅವರಿಗೆ ಬರೆದ ಪತ್ರದಲ್ಲಿ ಹೋಟೆಲ್ ಮಾಲೀಕರ ಸಂಘ ಉಲ್ಲೇಖಿಸಿದೆ.