ಗ್ರಾಹಕರಿಂದ ಮೋಸಕ್ಕೊಳಗಾಗೋದನ್ನ ತಪ್ಪಿಸುವ ಸಲುವಾಗಿ ವ್ಯಾಪಾರಿಗಳು ಸಾಮಾನ್ಯವಾಗಿ ಎಲ್ಲಾ ಮಾದರಿಯ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ತಾರೆ, ಆದರೆ ಇಲ್ಲೊಬ್ಬ ರೈತ ಮಾತ್ರ ಎಲ್ಲರಿಗಿಂತ ವಿಭಿನ್ನವಾಗಿ ಪ್ಲಾನ್ ಮಾಡಿದ್ದಾರೆ. ಈತ ಸಂಪೂರ್ಣ ಗ್ರಾಹಕರ ಮೇಲೆ ನಂಬಿಕೆಯನ್ನಿಟ್ಟು ತಮ್ಮ ತರಕಾರಿ ಅಂಗಡಿಯನ್ನ ಸ್ಥಾಪಿಸಿದ್ದಾರೆ.
ತೆಲಂಗಾಣ ರಾಜ್ಯದ ಲಕ್ಷ್ಮಾಪಯರ ಗ್ರಾಮದ ನಿವಾಸಿಯಾಗಿರುವ ಎಡ್ಮಲಾ ಮಲ್ಲಾ ರೆಡ್ಡಿ ಎಂಬ ಹೆಸರಿನ ರೈತ ಜಗಿತಿಯಲ್-ಪೆದ್ದಪಳ್ಳಿ ಮುಖ್ಯ ರಸ್ತೆಯಲ್ಲಿ ತರಕಾರಿ ಅಂಗಡಿಯನ್ನ ಸ್ಥಾಪಿಸಿದ್ದು ಇದು ಸ್ಥಳೀಯರು ಮಾತ್ರವಲ್ಲದೇ ಪಕ್ಕದ ಗ್ರಾಮದ ಜನತೆಯನ್ನೂ ಸೆಳೆಯುತ್ತಿದೆ.
ಅಂದಹಾಗೆ ಈ ತರಕಾರಿ ಅಂಗಡಿಗೆ ಮಲ್ಲಾ ರೆಡ್ಡಿ ಯಾವುದೇ ಹೆಸರನ್ನ ಇಟ್ಟಿಲ್ಲ. ಅಂಗಡಿಯ ಮುಂದೆ ನಿಮಗೆ ದರ ನಿಗದಿಯ ಪಟ್ಟಿ ಕಾಣಸಿಗುತ್ತೆ. ತರಕಾರಿಯನ್ನು ತೆಗೆದುಕೊಂಡ ಗ್ರಾಮಸ್ಥರು ದರ ಪಟ್ಟಿಯನ್ನ ಆಧರಿಸಿ ಹಣವನ್ನ ಒಂದು ಬಾಕ್ಸಿನ ಒಳಗೆ ಹಾಕಿದರಾಯ್ತು. ನಿಮ್ಮ ಬಳಿ ನಗದು ಇಲ್ಲ ಎಂದರೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಆನ್ಲೈನ್ ಪಾವತಿ ಮಾಡಬಹುದು. ಈ ತರಕಾರಿ ಅಂಗಡಿ ಮೂಲಕ ಮಲ್ಲಾ ರೆಡ್ಡಿ ದಿನಕ್ಕೆ 300 ರಿಂದ 500 ರೂಪಾಯಿ ದುಡಿಯುತ್ತಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಮಲ್ಲಾ ರೆಡ್ಡಿ, ನಮ್ಮ ಅಂಗಡಿಗೆ ಗ್ರಾಹಕರಿಂದ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗ್ತಿದೆ. ಗ್ರಾಹಕರು ಪ್ರಾಮಾಣಿಕವಾಗಿ ಹಣವನ್ನ ಬಾಕ್ಸಿನೊಳಕ್ಕೆ ಹಾಕುತ್ತಿದ್ದಾರೆ, ಅಚ್ಚರಿಯ ವಿಚಾರ ಅಂದರೆ ಹಣವನ್ನಾಗಲಿ, ತರಕಾರಿಯನ್ನಾಗಲಿ ಯಾರೂ ಕದಿಯುತ್ತಿಲ್ಲ ಎಂದು ಹೇಳಿದ್ದಾರೆ.
ಅಂಗಡಿಯಲ್ಲಿ ಏಕೆ ಯಾರೂ ಇರೋದಿಲ್ಲ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಲ್ಲಾ ರೆಡ್ಡಿ, ದಿನವಿಡೀ ಅಂಗಡಿಯಲ್ಲಿ ಕೂರಲೂ ನನ್ನ ಬಳಿ ಸಮಯವಿಲ್ಲ. ನಾನು ಈ ಸಮಯದಲ್ಲಿ ನಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿರ್ತೇನೆ. ಇನ್ನು ಬೇರೆ ಯಾರನ್ನಾದರೂ ಕೆಲಸಕ್ಕೆ ನೇಮಿಸಿದ್ರೆ ಅವರಿಗೆ ದಿನಕ್ಕೆ ಕನಿಷ್ಟ 300 ರೂಪಾಯಿಯನ್ನಾದರೂ ನೀಡಬೇಕಾಗುತ್ತೆ ಎಂದು ಹೇಳಿದ್ರು.
ಮಲ್ಲಾರೆಡ್ಡಿ ಬಿಎ ಹಾಗೂ ಬಿಎಡ್ ಪದವಿಧರರಾಗಿದ್ದಾರೆ. ಇವರು ನೈಸರ್ಗಿಕ ವಿಧಾನದ ಮೂಲಕ ತಮ್ಮ 7 ಎಕರೆ ಜಮೀನಿನಲ್ಲಿ ತರಕಾರಿ ಹಾಗೂ ಹಣ್ಣುಗಳನ್ನ ಬೆಳೆಯುತ್ತಿದ್ದಾರೆ. ತಮ್ಮ ವಿನೂತನ ಕೃಷಿಗಾಗಿ ಮಲ್ಲಾರೆಡ್ಡಿ ಕಳೆದ 3 ವರ್ಷಗಳಲ್ಲಿ 15 ಲಕ್ಷ ರೂಪಾಯಿ ವ್ಯಯಿಸಿದ್ದಾರೆ, ಹಾಗೂ ಈ ಹಣವನ್ನ ತಮ್ಮ ಆಹಾರ ಪದಾರ್ಥ ವ್ಯಾಪಾರದ ಮೂಲಕ ವಾಪಸ್ ಪಡೆಯುತ್ತಿದ್ದಾರಂತೆ.