ಕೊರೊನಾ ಸಾಂಕ್ರಾಮಿಕದಿಂದಾಗಿ ಬೇಡಿಕೆ ಕಡಿಮೆಯಾಗುತ್ತಿರುವ ಹಿನ್ನೆಲೆ ಹೋಂಡಾ ಮೋಟಾರ್ ಕಂಪನಿ ತನ್ನ ಸಂಸ್ಥೆಯ ಕೆಲ ಖಾಯಂ ನೌಕರರಿಗೆ ಸ್ವಯಂ ಪ್ರೇರಿತ ನಿವೃತ್ತಿಯ ಆಫರ್ ನೀಡುತ್ತಿದೆ.
ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್ ಸೈಕಲ್ಸ್ ಹಾಗೂ ಸ್ಕೂಟರ್ಸ್ ಇಂಡಿಯಾ ಕೊರೊನಾ ಸಾಂಕ್ರಾಮಿಕದ ಬಳಿಕ ಮಂದಗತಿಯ ಬೇಡಿಕೆ ಹಾಗೂ ಆರ್ಥಿಕ ಕುಸಿತವನ್ನ ಅನುಭವಿಸುತ್ತಿದೆ ಎಂದು ತಿಳಿಸಿದೆ.
ಬೇಡಿಕೆ ನಿಧಾನವಾಗುತ್ತಿರೋದ್ರಿಂದ ನೋಯ್ಡಾ ಕಾರು ಪ್ಲಾಂಟ್ನ್ನ ಬಂದ್ ಮಾಡಿದ ಬೆನ್ನಲ್ಲೇ ಜಪಾನ್ ಮೂಲದ ಕಂಪನಿ ಇದೀಗ ಈ ನಿರ್ಧಾರ ಕೈಗೊಂಡಿದೆ. ಸ್ವಯಂ ನಿವೃತ್ತಿ ಹೊಂದ ಬಯಸುವ ಕಾರ್ಮಿಕರಿಗೆ ಕಂಪನಿ ಕೆಲ ಆಫರ್ಗಳನ್ನೂ ನೀಡಿದೆ.
ಜನವರಿ 31 – 2021ರೊಳಗಾಗಿ 10 ವರ್ಷಗಳ ಸೇವೆಯನ್ನ ಪೂರ್ಣಗೊಳಿಸಿದ ಅಥವಾ 40 ವರ್ಷ ಮೇಲ್ಪಟ್ಟ ಖಾಯಂ ಉದ್ಯೋಗಿಗಳಿಗೆ ಈ ಸ್ವಯಂ ನಿವೃತ್ತಿ ಆಫರ್ ಸಿಗಲಿದೆ. ಸೇವೆಯ ವರ್ಷಗಳನ್ನ ಪರಿಗಣಿಸಿ 72 ಲಕ್ಷ ರೂಪಾಯಿವರೆಗೆ ಪಿಂಚಣಿ ಮೊತ್ತ ಸಿಗಲಿದೆ.
ಎಷ್ಟು ಉದ್ಯೋಗಿಗಳು ಸ್ವಯಂ ನಿವೃತ್ತಿಗೆ ಅರ್ಹರಾಗಿದ್ದಾರೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲವಾದರೂ ಸಹ ನಿವೃತ್ತಿಗೆ ಆಯ್ಕೆಯಾದ ಮೊದಲ 400 ಮಂದಿ ಕಾರ್ಮಿಕರು 50000 ರೂಪಾಯಿಯನ್ನ ಹೆಚ್ಚುವರಿಯಾಗಿ ಪಡೆಯಲಿದ್ದಾರೆ.