ನವದೆಹಲಿ: ಬಜೆಟ್ ಬೆಂಬಲವಿಲ್ಲದೆ ಇಪಿಎಸ್ -95 ಯೋಜನೆಯಡಿ ಕನಿಷ್ಠ ಮಾಸಿಕ ಪಿಂಚಣಿ ಹೆಚ್ಚಳ ಸಾಧ್ಯವಿಲ್ಲವೆಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರ ಕಾರ್ಮಿಕ ಸಚಿವರಾದ ಸಂತೋಷ್ ಗಂಗ್ವರ್ ಅವರು ಸಂಸತ್ನಲ್ಲಿ ಈ ಬಗ್ಗೆ ಲಿಖಿತ ಉತ್ತರ ನೀಡಿ, ಯೋಜನೆಯ ಆರ್ಥಿಕ ಕಾರ್ಯಸಾಧ್ಯತೆ ಅಥವಾ ಹೆಚ್ಚುವರಿ ಬಜೆಟ್ ವೆಚ್ಚಕ್ಕೆ ಧಕ್ಕೆಯಾಗದಂತೆ ಕನಿಷ್ಠ ಮಾಸಿಕ ಪಿಂಚಣಿ ಮೊತ್ತವನ್ನು ಹೆಚ್ಚಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನೌಕರರ ಪಿಂಚಣಿ ಯೋಜನೆ -1995 ಅಡಿಯಲ್ಲಿ ಕನಿಷ್ಠ ಪಿಂಚಣಿ ಪಾವತಿ ಹೆಚ್ಚಳವು ಯೋಜನೆಯ ಆರ್ಥಿಕ ಕಾರ್ಯಸಾಧ್ಯತೆ ಅಥವಾ ಬಜೆಟ್ ಹೆಚ್ಚುವರಿ ಬೆಂಬಲವನ್ನು ರಾಜಿ ಮಾಡಿಕೊಳ್ಳದೆ ಸಾಧ್ಯವಿಲ್ಲ. ನೌಕರರ ಪಿಂಚಣಿ ಯೋಜನೆ -ಇಪಿಎಸ್ 1995 ರ ಪರಿಶೀಲನೆಗಾಗಿ ಸರ್ಕಾರ ಉನ್ನತ ಅಧಿಕಾರ ಹೊಂದಿರುವ ಮೇಲ್ವಿಚಾರಣಾ ಸಮಿತಿಯನ್ನು ರಚಿಸಿದ್ದು, ಈ ಸಮಿತಿ ಸಮಿತಿ ವರದಿ ಸಲ್ಲಿಸಿ ಮಧ್ಯಂತರ ಪಿಂಚಣಿ ಹೆಚ್ಚಳಕ್ಕೆ ಶಿಫಾರಸು ಮಾಡಿದೆ.
ಪಿಂಚಣಿದಾರರಿಗೆ ಮಾಸಿಕ ಕನಿಷ್ಠ 3000 ರೂ. ನೀಡುವಂತೆ ಕಾರ್ಮಿಕ ಸಂಘಗಳ ಒತ್ತಾಯವಿದ್ದು, ನಂತರ ಜೀವನ ವೆಚ್ಚ ಹೆಚ್ಚಳಕ್ಕೆ ಅನುಗುಣವಾಗಿ ಕನಿಷ್ಠ 5000 ರೂ. ಅಥವಾ ಇನ್ನು ಹೆಚ್ಚಿನ ಪಿಂಚಣಿ ನೀಡಬೇಕೆಂದು ಒತ್ತಾಯ ಕೇಳಿಬಂದಿದೆ. ಸದಸ್ಯರ ಪಿಂಚಣಿಯ ಮೊತ್ತವನ್ನು ಸೇವೆಯ ಅವಧಿ ಮತ್ತು ಪಿಂಚಣಿ ನಿಧಿಯಲ್ಲಿ ಸದಸ್ಯರ ಕೊಡುಗೆಯನ್ನು ಆಧರಿಸಿ ನಿರ್ಧರಿಸಲಾಗುವುದು ಎಂದು ಹೇಳಲಾಗಿದೆ.