ನವದೆಹಲಿ: ಭಾರತದಲ್ಲಿ ಅಡುಗೆ ಅನಿಲ, ಪೆಟ್ರೋಲ್ ಮತ್ತು ಡೀಸೆಲ್ ದರ ಭಾರಿ ದುಬಾರಿಯಾಗುತ್ತಿದ್ದಂತೆ ಇಂಧನ ಕಳ್ಳಸಾಗಣೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ನೇಪಾಳದಿಂದ ಇಂಧನ ಕಳ್ಳಸಾಗಣೆ ಮಾಡಲಾಗುತ್ತಿದೆ.
1360 ಲೀಟರ್ ಡೀಸೆಲ್ ತುಂಬಿದ್ದ ದೊಡ್ಡ ಟ್ಯಾಂಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಗ್ಲೋಬಲ್ ಪೆಟ್ರೋಲ್ ಪ್ರೈಸಸ್ ಡಾಟ್ ಕಾಂ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಭಾರತದ ಹಲವಾರು ಭಾಗದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 100 ರೂ. ಮತ್ತು ಅದಕ್ಕಿಂತ ಹೆಚ್ಚಾದ ಹಿನ್ನೆಲೆಯಲ್ಲಿ ಅಕ್ರಮ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟಿದೆ.
ವಿಪರ್ಯಾಸ ಎಂದರೆ ನೇಪಾಳ ಎಲ್ಲಾ ಪೆಟ್ರೋಲಿಯಂ ಉತ್ಪನ್ನ, ಇಂಧನಗಳನ್ನು ಭಾರತದಿಂದ ಆಮದು ಮಾಡಿಕೊಳ್ಳುತ್ತದೆ. ಮಾತ್ರವಲ್ಲ, ನೆರೆಯ ಬಾಂಗ್ಲಾದೇಶ ಮತ್ತು ಶ್ರೀಲಂಕಾ ರಫ್ತು ಮಾಡುತ್ತದೆ. ತೆರಿಗೆ ವ್ಯತ್ಯಾಸದಿಂದಾಗಿ ನೇಪಾಳದಲ್ಲಿ ಭಾರತಕ್ಕಿಂತ ಪೆಟ್ರೋಲ್ ಬೆಲೆ ಕಡಿಮೆಯಾಗಿದ್ದು, ಈ ಕಾರಣದಿಂದ ಕಳ್ಳಸಾಗಣೆ ಹೆಚ್ಚಾಗಿದೆ ಎಂದು ಬಿಹಾರ ರಾಜ್ಯದ ಆದಾಪುರದಲ್ಲಿ ಗ್ಯಾಸ್ ಸ್ಟೇಷನ್ ನಡೆಸುತ್ತಿರುವ ರವಿ ಭಾರತಿ ಅವರು ಹೇಳಿದ್ದಾರೆ.
ನೇಪಾಳದಿಂದ ಕೇವಲ ಮೂರು ಕಿಲೋಮೀಟರ್ ದೂರದಲ್ಲಿ ಬಂಕ್ ಹೊಂದಿರುವ ಅವರು ಇಂತಹ ಬೆಳವಣಿಗೆ ನಮ್ಮ ವಹಿವಾಟಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ದೂರಿದ್ದಾರೆ.
ಭಾರತದಲ್ಲಿ ತೆರಿಗೆ ಹೆಚ್ಚಾಗಿರುವ ಕಾರಣ ಇಂಧನ ಬೆಲೆ ಕೂಡ ಹೆಚ್ಚಾಗಿದೆ. ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಗಾಗಿ ಗ್ರಾಹಕರು ಪಾವತಿಸುವ ಹಣದಲ್ಲಿ ಶೇಕಡ 60 ರಷ್ಟು ತೆರಿಗೆ ಇದೆ ಎಂದು ಹೇಳಲಾಗಿದೆ.