ನಮಗೆಲ್ಲರಿಗೂ ಗೊತ್ತು. ರೋಮ್ ಒಂದೇ ದಿನದಲ್ಲಿ ನಿರ್ಮಾಣವಾಗಿಲ್ಲ. ಯಾವುದೇ ಒಂದು ಒಳ್ಳೆ ಕೆಲಸಕ್ಕೆ ಸಮಯ ನೀಡಬೇಕು. ಒಳ್ಳೆಯದಾಗುವವರೆಗೆ ತಾಳ್ಮೆಯಿಂದ ಕಾಯಬೇಕಾಗುತ್ತದೆ. ಈ ಕ್ಷಣದಲ್ಲಿ ಶ್ರೀಮಂತರಾಗಬೇಕೆಂದು ನಾವು ಬಯಸುತ್ತೇವೆ. 20 ವರ್ಷಗಳ ನಂತ್ರ ಆಗುವ ಲಾಭದ ಬಗ್ಗೆ ನಾವೆಂದೂ ಆಲೋಚನೆ ಮಾಡುವುದಿಲ್ಲ.
ಹಣ ಉಳಿಕೆಗೆ ಉತ್ತಮ ಮಾರ್ಗ ಹೂಡಿಕೆ. ಹೂಡಿಕೆ ಬಗ್ಗೆ ಸರಿಯಾಗಿ ತಿಳಿದು, ಅದ್ರಲ್ಲಿ ಹೂಡಿಕೆ ಮಾಡಿದ್ರೆ ಮಾತ್ರ ಭವಿಷ್ಯ ಗಟ್ಟಿಯಾಗಿರಲು ಸಾಧ್ಯ.
ಒಳ್ಳೆಯ ಹೂಡಿಕೆ ಮಾಡಿ, ಸರಿಯಾಗಿ ಪಾವತಿ ಮಾಡಿ, ಅದ್ರ ಬಗ್ಗೆ ಚಿಂತೆ ಬಿಟ್ಟುಬಿಡಿ ಎಂಬ ನಿಯಮವನ್ನು ಪಾಲಿಸಬೇಕು. ಅಂದ್ರೆ ಮೊದಲು ಹೂಡಿಕೆ ಮಾಡಬೇಕು. ನಂತ್ರ ಯಾವುದೇ ಚಿಂತೆಯಿಲ್ಲದೆ ಆರಾಮಾಗಿರಿ. 25 ವರ್ಷಗಳ ಕಾಲು ಏನೂ ಮಾಡದೆ ಇರೋದು ಸುಲಭವಲ್ಲ. ಆದ್ರೆ 25 ವರ್ಷಗಳ ನಂತ್ರ ಇದೇ ಹೂಡಿಕೆ ನಿಮ್ಮನ್ನು ಶ್ರೀಮಂತಗೊಳಿಸುತ್ತದೆ ಎಂಬುದು ಸತ್ಯ.
ಹೂಡಿಕೆಗೂ ಭಾವನೆಗೂ ಸಂಬಂಧವಿದೆ. ಅದೃಷ್ಟ ಏನನ್ನೂ ಮಾಡುವುದಿಲ್ಲ. ಮಾರುಕಟ್ಟೆ ಏರಿದಾಗ ಹೂಡಿಕೆದಾರರು ಹಣ ಮಾಡುತ್ತಾರೆ. ಆದ್ರೆ ಮಾರುಕಟ್ಟೆ ಇಳಿದಾಗ ಹಣವನ್ನು ಕಳೆದುಕೊಳ್ಳುತ್ತಾರೆ. ಕೆಲವು ವರ್ಷಗಳಿಗೊಮ್ಮೆ ಮಾರುಕಟ್ಟೆಗಳು ಶೇಕಡ 20 ಕ್ಕಿಂತ ಹೆಚ್ಚು ಕುಸಿಯುತ್ತವೆ. ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು.
ಮಾರುಕಟ್ಟೆ ಕುಸಿದಾಗ ಹಣ ಕಳೆದುಕೊಳ್ಳುತ್ತೇವೆ. ಇದು ಆತಂಕ, ಹತಾಶೆ, ಭಯಕ್ಕೆ ಕಾರಣವಾಗುತ್ತದೆ. ಆಗ ಆ ಕ್ಷಣಕ್ಕೆ ಪ್ರತಿಕ್ರಿಯೆ ನೀಡಲು ನಾವು ಹೋಗ್ತೇವೆ. ಆದ್ರೆ ಭಯ ಬಿಡಬೇಕು. ಮಾನಸಿಕ ದೃಢತೆ ಅಗತ್ಯ. ನಿಮ್ಮ ಹೂಡಿಕೆ ಮೇಲೆ ನಂಬಿಕೆಯಿಡಿ. ಪ್ರತಿದಿನ ಮಾರುಕಟ್ಟೆಗಳನ್ನು ನೋಡಬೇಡಿ. ಹೊರಗೆ ಏನಾಗ್ತಿದೆ ಎಂಬ ಸುಳಿವು ಇಲ್ಲದಿದ್ದರೆ, ನಿಮ್ಮ ಹೂಡಿಕೆ ಮತ್ತು ಹಣ ಗಳಿಕೆಯ ಸಾಧ್ಯತೆ ಸುಧಾರಿಸಬಹುದು.
ಕೊನೆಯದಾಗಿ, ದೀರ್ಘಾವಧಿಯ ಹೂಡಿಕೆಯು ಅತ್ಯುತ್ತಮ ವಿಧಾನ ಎನ್ನಬಹುದು. ಹಣವನ್ನು ಗಳಿಸುವುದು ಸುಲಭವಲ್ಲ. ಇದು ಸಮಯ ತೆಗೆದುಕೊಳ್ಳುತ್ತದೆ. ಇದಕ್ಕೆ ಬಲವಾದ ಮಾನಸಿಕ ಕೌಶಲ್ಯಗಳು ಬೇಕಾಗುತ್ತವೆ. ಉತ್ತಮ ತಂಡ ಬೇಕಾಗುತ್ತದೆ. ಎಲ್ಲಕ್ಕಿಂತ ಮೊದಲು ನಿಮ್ಮ ಪ್ರಾರಂಭ ಮುಖ್ಯವಾಗುತ್ತದೆ. ಅನೇಕರಿಗೆ ಪ್ರಾರಂಭ ಕಷ್ಟ. ನೀವು ನೀರಿಗೆ ಇಳಿದಾಗ ಮಾತ್ರ ಆಳ ಅರಿಯಲು ಸಾಧ್ಯ.
ಇದ್ರ ಬಗ್ಗೆ ಆಲೋಚನೆ ಮಾಡಿ ಸಮಯ ಕಳೆಯುವ ಬದಲು, ಬೇಗನೆ ಪ್ರಾರಂಭಿಸಿ. ಜೀವನದ ಅತ್ಯಮೂಲ್ಯ ಆಸ್ತಿಯಾದ ಸಮಯ, ಕಳೆದು ಹೋಗಲು ಬಿಡಬಾರದು. ಇದು ಎಲ್ಲಾ ಯಶಸ್ವಿ ಹೂಡಿಕೆದಾರರ ಲಕ್ಷಣವಾಗಿದೆ. ನಾವು ಹಣವನ್ನು ಪ್ರೀತಿಸುತ್ತೇವೆ. ಆದರೆ ಹಣವು ನಮ್ಮನ್ನು ಮರಳಿ ಪ್ರೀತಿಸುವುದಿಲ್ಲ ಎಂದು ನಾವು ನಂಬುತ್ತೇವೆ. ಹಣಕ್ಕೆ ಯಾವುದೇ ಭಾವನೆ ಇಲ್ಲ. ಹಣವನ್ನು ಕೆಲಸಕ್ಕೆ ಹಾಕಿದಾಗ ಮಾತ್ರ ಅದು ಕೆಲಸ ಮಾಡುತ್ತದೆ. ಇಲ್ಲದಿದ್ದರೆ ಅದು ವ್ಯರ್ಥವಾಗುತ್ತೆ. ಹೀಗಾಗಿ ಸೂಕ್ತ ಸಮಯ ನೋಡಿ ಹೂಡಿಕೆಯನ್ನು ಮಾಡಬೇಕು.