ನವದೆಹಲಿ: ಮಾರ್ಚ್ 1 ರವರೆಗೆ ಟೋಲ್ ಪ್ಲಾಜಾಗಳಲ್ಲಿ ಉಚಿತವಾಗಿ ಫಾಸ್ಟ್ಯಾಗ್ ಪಡೆಯಬಹುದಾಗಿದೆ. ಡಿಜಿಟಲ್ ಇಂಡಿಯಾಗೆ ಒತ್ತು ನೀಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟ್ಯಾಗ್ ಕಡ್ಡಾಯ ಮಾಡಿದೆ. ಟೋಲ್ ಪ್ಲಾಜಾಗಳಲ್ಲಿ ಶುಲ್ಕವನ್ನು ಫಾಸ್ಟ್ಯಾಗ್ ಮೂಲಕ ಪಾವತಿಸಬೇಕಿದೆ.
ಉಚಿತವಾಗಿ ಫಾಸ್ಟ್ಯಾಗ್ ಪಡೆಯಲು ಮಾರ್ಚ್ 1 ರ ವರೆಗೆ ಅವಕಾಶ ನೀಡಲಾಗಿದೆ. ಬುಧವಾರ ಫಾಸ್ಟ್ಯಾಗ್ ಮೂಲಕ ದೈನಂದಿನ ಟೋಲ್ ಸಂಗ್ರಹ 95 ಕೋಟಿ ರೂಪಾಯಿಗೆ ತಲುಪಿದೆ. 60 ಲಕ್ಷ ವಹಿವಾಟು ನಡೆಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ಫಾಸ್ಟ್ಯಾಗ್ ಇಲ್ಲದ ವಾಹನ ಮಾಲೀಕರು ನಿಗದಿತ ಟೋಲ್ ಶುಲ್ಕವನ್ನು ನಗದು ರೂಪದಲ್ಲಿ ಎರಡುಪಟ್ಟು ಪಾವತಿಸಬೇಕಿದೆ. ಅಂದ ಹಾಗೆ, ಟೋಲ್ ಪ್ಲಾಜಾಗಳಲ್ಲಿ ಯಾವುದೇ ತಾಂತ್ರಿಕ ದೋಷಗಳಿದ್ದಾಗ ಫಾಸ್ಟ್ಯಾಗ್ ಬಳಕೆದಾರರು ತಮ್ಮ ಟ್ಯಾಗ್ ಗಳಲ್ಲಿ ಒಂದು ಪೈಸೆಯನ್ನು ಪಾವತಿಸದೆ ಪ್ಲಾಜಾಗಳನ್ನು ದಾಟಬಹುದು ಎಂದು ಎನ್ಎಚ್ಎಸ್ ಅಧಿಕಾರಿಗಳು ಹೇಳಿದ್ದಾರೆ.
ಎಲೆಕ್ಟ್ರಾನಿಕ್ ಟೋಲ್ ಪಾವತಿಯನ್ನು ಕಡ್ಡಾಯಗೊಳಿಸಿದ ಎರಡು ದಿನಗಳ ನಂತರ ಫಾಸ್ಟ್ಯಾಗ್ ಬಳಕೆದಾರರ ಸಂಖ್ಯೆ ತೀವ್ರ ಏರಿಕೆ ಕಂಡಿದೆ. ಮಾರ್ಚ್ 1 ರ ವರೆಗೆ ದೇಶಾದ್ಯಂತ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯ 770 ಟೋಲ್ ಗಳಲ್ಲಿ ಬಳಕೆದಾರರು ಉಚಿತ ಫಾಸ್ಟ್ಯಾಗ್ ಪಡೆಯಬಹುದಾಗಿದೆ ಎಂದು ಎನ್.ಹೆಚ್.ಎ.ಐ. ತಿಳಿಸಿದೆ.
ಕಳೆದ ಎರಡು ದಿನದಲ್ಲಿ 2.5 ಲಕ್ಷ ಟ್ಯಾಗ್ ಗಳ ದಾಖಲೆಯ ಮಾರಾಟ ಮಾಡಲಾಗಿದೆ. ಇವುಗಳ ಜೊತೆಗೆ myfastag ಅಪ್ಲಿಕೇಶನ್ ಗೆ ಚೆಕ್ ಬ್ಯಾಲೆನ್ಸ್ ಸ್ಥಿತಿ ಫೀಚರ್ ಸೇರಿಸಲಾಗಿದೆ.