ಸಾರ್ವಜನಿಕ ಭವಿಷ್ಯ ನಿಧಿ(PPF) 15 ವರ್ಷಗಳ ಹೂಡಿಕೆ ಯೋಜನೆಯಾಗಿದ್ದು, ಪಿಪಿಎಫ್ ಕುರಿತಾಗಿ ಸಾಮಾನ್ಯವಾಗಿ ಎಲ್ಲರಿಗೂ ಮಾಹಿತಿ ಇರುತ್ತೆ.
ತೆರಿಗೆ ವಿನಾಯಿತಿ ಪಡೆಯಲು ಪಿಪಿಎಫ್ನಲ್ಲಿ ಠೇವಣಿ ಹೂಡುವ ಗ್ರಾಹಕರು ಬಡ್ಡಿ ಸಂಪಾದನೆ, ಮೊತ್ತ ವಾಪಸ್ಸಾತಿ ಸೇರಿದಂತೆ ಅನೇಕ ಪ್ರಯೋಜನಗಳನ್ನ ಪಡೆಯುತ್ತಾರೆ. ಪಿಪಿಎಫ್ 15 ವರ್ಷಗಳ ಹೂಡಿಕೆ ಯೋಜನೆಯಾಗಿದ್ದರೂ 20, 25 ಹಾಗೂ 30 ವರ್ಷಗಳ ಅವಧಿಗೆ ಈ ಯೋಜನೆಯನ್ನ ವಿಸ್ತರಣೆ ಮಾಡಬಹುದಾಗಿದೆ.
ಯಾವುದೇ ಹಣಕಾಸು ವರ್ಷದಲ್ಲಿ ಕನಿಷ್ಟ 500 ರೂಪಾಯಿ ನಿಮ್ಮ ಪಿಪಿಎಫ್ ಖಾತೆಯಲ್ಲಿ ಠೇವಣಿ ಇಡದೇ ಹೋದಲ್ಲಿ ನಿಮ್ಮ ಪಿಪಿಎಫ್ ಖಾತೆ ಸ್ಥಗಿತಗೊಳ್ಳುತ್ತೆ. ಸ್ಥಗಿತಗೊಂಡ ಪಿಪಿಎಫ್ ಖಾತೆಯಲ್ಲಿ ಸಾಲ ಸೌಲಭ್ಯವಾಗಲಿ ಅಥವಾ ಇನ್ಯಾವುದೇ ಸೌಲಭ್ಯಗಳು ಸಿಗೋದಿಲ್ಲ. ಆದರೆ, ಸ್ಥಗಿತಗೊಂಡ ಖಾತೆಯನ್ನ ಬಹಳ ಸುಲಭವಾಗಿ ಮರುಬಳಕೆ ಮಾಡಬಹುದಾಗಿದೆ.
1968 ರಲ್ಲಿ ರಾಷ್ಟ್ರೀಯ ಉಳಿತಾಯ ಸಂಸ್ಥೆ ಪರಿಚಯಿಸಿದ ಪಿಪಿಎಫ್ ಯೋಜನೆ ಸಣ್ಣ ಉಳಿತಾಯದ ಮೊತ್ತವನ್ನ ಠೇವಣಿ ಇಡುವ ಮೂಲಕ ಗ್ರಾಹಕರಿಗೆ ಲಾಭದಾಯಕ ಮೊತ್ತ ನೀಡುವ ಗುರಿಯನ್ನ ಹೊಂದಿದೆ. ಪ್ರಸ್ತುತ ಪಿಪಿಎಫ್ ಖಾತೆಯಲ್ಲಿ ಪ್ರತಿವರ್ಷ ಕನಿಷ್ಟ 500 ರೂಪಾಯಿ ಹಾಗೂ ಗರಿಷ್ಠ 1.5 ಲಕ್ಷ ರೂಪಾಯಿ ವಹಿವಾಟು ನಡೆಸಬಹುದಾಗಿದೆ. ನೀವೇನಾದರೂ ನಿಮ್ಮ ಪಿಪಿಎಫ್ ಖಾತೆಯಲ್ಲಿ 1.5 ಲಕ್ಷ ರೂಪಾಯಿಗಿಂತ ಹೆಚ್ಚು ಹಣವನ್ನ ಠೇವಣಿ ಇಟ್ಟರೆ, ನಿಮಗೆ ಹೆಚ್ಚುವರಿ ಬಡ್ಡಿ ಸಿಗಲ್ಲ. ಅಥವಾ ತೆರಿಗೆ ಕಾಯ್ದೆಯಡಿಯಲ್ಲಿ ರಿಯಾಯಿತಿಯೂ ಸಿಗುವುದಿಲ್ಲ ಎನ್ನಲಾಗಿದೆ.