ನವದೆಹಲಿ: ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾದ ಜನತೆಗೆ ಇಂದಿನಿಂದ ಮತ್ತಷ್ಟು ಹೊರೆಯಾಗಲಿದೆ. ಸರಕು ಮತ್ತು ಸೇವಾ ತೆರಿಗೆಯಲ್ಲಿ ಅನೇಕ ಬದಲಾವಣೆಯಾಗಿರುವ ಕಾರಣ ಇಂದಿನಿಂದ ಅಕ್ಕಿ, ಮೊಸರು, ಮಜ್ಜಿಗೆ, ಆಸ್ಪತ್ರೆಯ ಕೊಠಡಿ ಬಾಡಿಗೆ ಮೊದಲಾದ ಸರಕು ಸೇವೆಗಳು ದುಬಾರಿಯಾಗಲಿವೆ.
ಇದುವರೆಗೆ ವಿನಾಯಿತಿ ಪಡೆದುಕೊಂಡಿದ್ದ ಪ್ಯಾಕ್ ಮಾಡಲಾದ ಆಹಾರ ಪದಾರ್ಥಗಳಿಗೆ ಜಿ.ಎಸ್.ಟಿ. ಅನ್ವಯವಾಗಲಿದ್ದು, ಬೆಲೆ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟಲಿದೆ.
ಶೇಕಡ 5 ರ ಜಿಎಸ್‌ಟಿ ವ್ಯಾಪ್ತಿಗೆ ಮಂಡಕ್ಕಿ, ಅವಲಕ್ಕಿ, ಭತ್ತ, ಗೋಧಿ, ಬಾರ್ಲಿ, ಓಡ್ಸ್, ಅಕ್ಕಿ ಹಿಟ್ಟು, ಪನ್ನೀರ್, ಎಲ್ಲಾ ರೀತಿಯ ಬೆಲ್ಲ, ನೈಸರ್ಗಿಕ ಜೇನುತುಪ್ಪ ಖಂಡಸಾರಿ ಸಕ್ಕರೆ, ಮೊಸರು, ಮಜ್ಜಿಗೆ, ಲಸ್ಸಿ ಸೇರ್ಪಡೆ ಮಾಡಲಾಗಿದೆ.
1000 ರೂ.ಗಿಂತ ಅಧಿಕ ಬಾಡಿಗೆಯ ಹೋಟೆಲ್ ಕೊಠಡಿಗಳಿಗೆ ಶೇಕಡ 12ರಷ್ಟು ತೆರಿಗೆ ಹೊರೆ ಬೀಳಲಿದೆ.
ಐಸಿಯು ಹೊರತಾದ 5000 ರೂ. ಮೀರಿದ ಆಸ್ಪತ್ರೆ ಕೊಠಡಿ ಬಾಡಿಗೆ ಮೇಲೆ ಶೇಕಡ 5 ರಷ್ಟು ತೆರಿಗೆ ಹಾಕಲಾಗುವುದು.
ಶೇಕಡ 12 ರಿಂದ 18 ರಷ್ಟು ತೆರಿಗೆ ವ್ಯಾಪ್ತಿಗೆ ಎಲ್ಇಡಿ ಲೈಟ್ ಗಳು, ಕತ್ತರಿ, ಚಾಕು, ಪೆನ್ಸಿಲ್, ಶಾರ್ಪ್ನರ್, ಬ್ಲೇಡ್, ಚಮಚ, ಪೋರ್ಕ್, ಏಣಿ, ಸ್ಕಿಮ್ಮರ್, ಸೈಕಲ್ ಪಂಪ್, ಮೋಟಾರ್ ಏರ್ ಪೈಪ್, ನೀರು ಎತ್ತುವ ಪಂಪ್, ಗಿರಣಿ ಉದ್ಯಮದಲ್ಲಿ ಬಳಸುವ ಯಂತ್ರೋಪಕರಣಗಳು ಸೇರ್ಪಡೆಯಾಗಿವೆ.
ಕೇಂದ್ರ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಪಡೆಯುವ ಸೇತುವೆ, ರಸ್ತೆ, ಕಾಲುವೆ, ಚಿತಾಗಾರ, ರೈಲ್ವೆ, ಮೆಟ್ರೋ, ಪೈಪ್ಲೈನ್ ನೀರಿನ ಘಟಕ ಮೊದಲಾದ ಗುತ್ತಿಗೆ ಉಪ ಗುತ್ತಿಗೆಯ ಮೇಲೆ ಶೇಕಡ 18 ರಷ್ಟು ತೆರಿಗೆ ವಿಧಿಸಲಾಗುವುದು.
ಎಲ್ಲಾ ವಿಧದ ಚೆಕ್ ಗಳ ಮೇಲೆ ಶೇಕಡ 18 ರಷ್ಟು ಜಿಎಸ್‌ಟಿ ಹಾಕಲಾಗುತ್ತದೆ.
ಸಾವಯವ ಗೊಬ್ಬರ, ತೆಂಗು ನಾರಿನ ಕಾಂಪೋಸ್ಟ್ ಗೆ ಶೇಕಡ 5 ರಷ್ಟು ಜಿಎಸ್‌ಟಿ ಇದೆ.
ಎಲ್ಲಾ ಬಗೆಯ ಚರ್ಮದ ಉತ್ಪನ್ನಗಳಿಗೆ ಶೇಕಡ 12ರಷ್ಟು ತೆರಿಗೆ ಹಾಕಲಾಗುವುದು.
ಎಲ್ಲಾ ಬಗೆಯ ಪ್ರಿಂಟೆಡ್ ಮ್ಯಾಪ್ ಮತ್ತು ಚಾರ್ಟ್ ಗಳಿಗೆ ಶೇಕಡ 12 ರಷ್ಟು ಜಿ.ಎಸ್.ಟಿ. ವಿಧಿಸಲಾಗುತ್ತದೆ.