ರುಪೇ ಡೆಬಿಟ್ ಕಾರ್ಡ್‌ಗಳು ಮತ್ತು ಕಡಿಮೆ ಮೌಲ್ಯದ BHIM-UPI ವಹಿವಾಟುಗಳ ಬಳಕೆಯನ್ನು ಉತ್ತೇಜಿಸಲು ಬ್ಯಾಂಕುಗಳಿಗೆ ಪ್ರೋತ್ಸಾಹಧನ ನೀಡಿದ್ದು, ಇಂತಹ ವಹಿವಾಟುಗಳಿಗೆ ಸರಕು ಮತ್ತು ಸೇವಾ ತೆರಿಗೆ(GST) ಅನ್ವಯಿಸುವುದಿಲ್ಲ.
ಹಣಕಾಸು ಸಚಿವಾಲಯದ ಪ್ರಕಾರ, ಪ್ರಸಕ್ತ ವರ್ಷದಲ್ಲಿ ರುಪೇ ಡೆಬಿಟ್ ಕಾರ್ಡ್‌ಗಳು ಮತ್ತು ಕಡಿಮೆ ಮೌಲ್ಯದ BHIM-UPI ವಹಿವಾಟುಗಳನ್ನು ಉತ್ತೇಜಿಸಲು ಬ್ಯಾಂಕ್ ಗಳಿಗೆ 2,600 ಕೋಟಿ ರೂ. ಪ್ರೋತ್ಸಾಹಧನ ನೀಡಲು ಕಳೆದ ವಾರ ಕ್ಯಾಬಿನೆಟ್ ಅನುಮೋದಿಸಿದೆ. ರುಪೇ ಡೆಬಿಟ್ ಕಾರ್ಡ್‌ಗಳು ಮತ್ತು ಕಡಿಮೆ ಮೌಲ್ಯದ BHIM-UPI ವಹಿವಾಟುಗಳು ಸಬ್ಸಿಡಿ ಸ್ವರೂಪದಲ್ಲಿರುತ್ತವೆ. ಆದ್ದರಿಂದ ತೆರಿಗೆಗೆ ಒಳಪಡುವುದಿಲ್ಲ ಎಂದು ಹೇಳಲಾಗಿದೆ.
ವ್ಯಾಪಾರ ಘಟಕಗಳನ್ನು ಹೊರತುಪಡಿಸಿ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಅಥವಾ ಸ್ಥಳೀಯ ಅಧಿಕಾರಿಗಳು ಒದಗಿಸುವ ಎಲ್ಲಾ ಸೇವೆಗಳು ಪ್ರಸ್ತುತ GST ಯಿಂದ ಮುಕ್ತವಾಗಿವೆ, ಕೆಲವು ಗೊತ್ತುಪಡಿಸಿದ ಸೇವೆಗಳಾದ ಅಂಚೆ ಇಲಾಖೆ ಸೇವೆಗಳು ಮತ್ತು ಸಾರಿಗೆಯನ್ನು ಹೊರತುಪಡಿಸಿ ಎಂದು ಹೇಳಲಾಗಿದೆ.
2017 ರ ಕೇಂದ್ರ ಜಿಎಸ್‌ಟಿ ಕಾಯಿದೆಯ ನಿಯಮಗಳ ಪ್ರಕಾರ, ಪ್ರೋತ್ಸಾಹವು ಸಬ್ಸಿಡಿ ಸ್ವರೂಪದಲ್ಲಿದೆ. ಅದು ಸೇವೆಯ ವೆಚ್ಚಕ್ಕೆ ನೇರವಾಗಿ ಸಂಬಂಧಿಸಿದೆ. ವಹಿವಾಟಿನ ತೆರಿಗೆಯ ಮೌಲ್ಯಕ್ಕೆ ಕೊಡುಗೆ ನೀಡುವುದಿಲ್ಲ ಎಂದು ಸಚಿವಾಲಯ ಹೇಳಿದೆ.
ರುಪೇ ಡೆಬಿಟ್ ಕಾರ್ಡ್‌ಗಳು ಮತ್ತು ಕಡಿಮೆ ಮೌಲ್ಯದ BHIM-UPI ವಹಿವಾಟುಗಳ ಉತ್ತೇಜನಕ್ಕಾಗಿ ಪ್ರೋತ್ಸಾಹ ಯೋಜನೆಯಡಿಯಲ್ಲಿ 2,000 ರೂ.ವರೆಗಿನ ಕಡಿಮೆ ಮೌಲ್ಯದ BHIM-UPI ವಹಿವಾಟುಗಳು, ರೂಪೇ ಡೆಬಿಟ್ ಕಾರ್ಡ್ ವಹಿವಾಟುಗಳ ಮೌಲ್ಯದ ಶೇಕಡಾವಾರು ಪ್ರೋತ್ಸಾಹಕಗಳನ್ನು ಸರ್ಕಾರವು ಬ್ಯಾಂಕ್ ಗಳಿಗೆ ಒದಗಿಸುತ್ತದೆ.
2007 ರ ಪಾವತಿಗಳು ಮತ್ತು ಸೆಟಲ್ ಮೆಂಟ್ ಸಿಸ್ಟಮ್ಸ್ ಆಕ್ಟ್ ಪ್ರಕಾರ, ಪಾವತಿಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು BHIM ಅಥವಾ RuPay ಡೆಬಿಟ್ ಕಾರ್ಡ್‌ಗಳನ್ನು ಬಳಸುವ ವ್ಯಕ್ತಿಗಳಿಂದ ಯಾವುದೇ ಶುಲ್ಕವನ್ನು ಸಂಗ್ರಹಿಸಲು ಬ್ಯಾಂಕ್ ಗಳು ಮತ್ತು ಸಿಸ್ಟಮ್ ಪೂರೈಕೆದಾರರಿಗೆ ಅನುಮತಿ ಇರುವುದಿಲ್ಲ.