ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್ಟಿ ಮಂಡಳಿ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಕೊರೋನಾ ಚಿಕಿತ್ಸೆ ಪರಿಕರಗಳ ಮೇಲಿನ ಸುಂಕ ವಿನಾಯಿತಿ ನೀಡಲಾಗಿದ್ದು, ಜಿಎಸ್ಟಿ ವಿಳಂಬ ಪಾವತಿಗೆ ವಿಧಿಸಲಾಗುವ ದಂಡ ಕಡಿತ ಮಾಡಲಾಗಿದೆ.
ಹೆಚ್ಚಿನ ಕಡಿತ, ವಿನಾಯಿತಿಗಳ ಅಗತ್ಯತೆಗಳನ್ನು ಪರೀಕ್ಷಿಸಲು ಮತ್ತು ವಿನಾಯಿತಿಗಳಲ್ಲಿ ಯಾವುದೇ ಹೊಸ ದರಗಳನ್ನು ನಿರ್ಧರಿಸುವ ಕುರಿತಾಗಿ ತೀರ್ಮಾನ ತೆಗೆದುಕೊಳ್ಳಲು ಸಚಿವರ ಸಮಿತಿಯನ್ನು ರಚಿಸಲಾಗುವುದು.
ಸಣ್ಣ ಮತ್ತು ಮಧ್ಯಮ ತೆರಿಗೆದಾರರ ಹೊರೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ತೆರಿಗೆದಾರರು ಪಾವತಿಸಬೇಕಾದ ದಂಡ ಶುಲ್ಕವನ್ನು ಕಡಿಮೆ ಮಾಡಲು ವಿಶೇಷ ಯೋಜನೆ ರೂಪಿಸಲಾಗಿದೆ.
ದಂಡದ ಶುಲ್ಕದ ಗರಿಷ್ಠ ಮೊತ್ತವನ್ನು ಕಡಿಮೆ ಮಾಡಲಾಗಿದ್ದು, ಭವಿಷ್ಯದ ತೆರಿಗೆ ಅವಧಿಗಳೊಂದಿಗೆ ಇದು ಜಾರಿಗೆ ಬರುತ್ತದೆ.
ರೆಕನ್ಸಿಲಿಯೇಷನ್ ಸ್ಟೇಟ್ಮೆಂಟ್ ಗಳನ್ನು ಚಾರ್ಟರ್ಡ್ ಅಕೌಂಟೆಂಟ್ ಗಳಿಂದ ಪ್ರಮಾಣಿಕರಿಸುವ ಬದಲಿಗೆ ಸ್ವಯಂ ಪ್ರಮಾಣೀಕರಣಕ್ಕೆ ಅನುವು ಮಾಡಿಕೊಡಲಾಗುವುದು. ಇದಕ್ಕಾಗಿ ಸಿಜಿಎಸ್ಟಿ ಕಾಯ್ದೆಗೆ ತಿದ್ದುಪಡಿ ಮಾಡಲಾಗುವುದು.
ಸಣ್ಣ ತೆರಿಗೆದಾರರ ವಾರ್ಷಿಕ ರಿಟರ್ನ್ ಫೈಲಿಂಗ್ ಎರಡು ಕೋಟಿ ರೂಪಾಯಿಗಿಂತ ಕಡಿಮೆ ವ್ಯವಹಾರ ಹೊಂದಿದ್ದರೆ, 2020 -21ರ ಸಮನ್ವಯ ಹೇಳಿಕೆಗಳನ್ನು5 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚು ಮೊತ್ತದ ವಹಿವಾಟು ಹೊಂದಿದ ತೆರಿಗೆದಾರರಿಂದ ಮಾತ್ರ ನೀಡಲಾಗುವುದು ಎಂದು ಹೇಳಲಾಗಿದೆ.