ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ 50ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಕ್ಯಾನ್ಸರ್ ಔಷಧಕ್ಕೆ ವಿನಾಯಿತಿ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.
ಕ್ಯಾನ್ಸರ್ ಔಷಧ ಡಿನುಟಿಕ್ಸಿಮ್ಯಾಬ್, ಎಫ್.ಎಸ್.ಎಂ.ಪಿ. ಮೇಲಿನ ಜಿಎಸ್‌ಟಿಗೆ ವಿನಾಯಿತಿ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಚಿತ್ರಪ್ರೇಮಿಗಳಿಗೂ ಜಿಎಸ್‌ಟಿ ಮಂಡಳಿ ಸಿಹಿ ಸುದ್ದಿ ನೀಡಿದೆ. ಚಿತ್ರಮಂದಿರಗಳಲ್ಲಿ ನೀಡಲಾಗುವ ಆಹಾರದ ಮೇಲಿನ ಜಿಎಸ್‌ಟಿ ದರವನ್ನು ಶೇ. 5 ಕ್ಕೆ ಇಳಿಕೆ ಮಾಡಲು ತೀರ್ಮಾನಿಸಲಾಗಿದೆ.
ಸಿನಿಮಾ ಟಿಕೆಟ್, ಪಾಪ್ ಕಾರ್ನ್, ತಂಪು ಪಾನೀಯಗಳಂತಹ ತಿನಿಸುಗಳನ್ನು ಒಟ್ಟಿಗೆ ಸೇರಿಸಿ ಮಾರಾಟ ಮಾಡಿದಲ್ಲಿ ಅವುಗಳನ್ನು ಸಂಯೋಜಿತ ಪೂರೈಕೆ ಎಂದು ಪರಿಗಣಿಸಬೇಕಾಗಿದೆ. ಸಿನಿಮಾ ಟಿಕೆಟ್ ಗೆ ಅನ್ವಯವಾಗುವ ದರದಂತೆ ತೆರಿಗೆ ವಿಧಿಸಬೇಕಿದೆ. 100 ರೂಪಾಯಿಗಿಂತ ಕಡಿಮೆ ಇರುವ ಚಲನಚಿತ್ರ ಟಿಕೆಟ್ ಗಳಿಗೆ ಶೇಕಡ 12ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಈ ದರ ಹೆಚ್ಚಿದಲ್ಲಿ ಶೇ. 18 ರಷ್ಟು ತೆರಿಗೆ ವಿಧಿಸಲಾಗುವುದು.
ಆನ್ಲೈನ್ ಗೇಮಿಂಗ್ ಗೆ ಶೇಕಡ 28 ರಷ್ಟು ಜಿಎಸ್‌ಟಿ ವಿಧಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಝರಿ ದಾರದ ಇಮಿಟೇಶನ್ ಮೇಲಿನ ಜಿಎಸ್‌ಟಿ ಶೇಕಡ 12 ರಿಂದ 5 ಕ್ಕೆ ಇಳಿಕೆಯಾಗಿದೆ. ಖಾಸಗಿ ಆಪರೇಟರ್ ಗಳ ಉಪಗ್ರಹ ಉಡಾವಣೆಗೆ ವಿನಾಯಿತಿ ನೀಡಲಾಗಿದೆ.