ಚಂಡಿಗಢ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್ಟಿ ಮಂಡಳಿ ಸಭೆಯಲ್ಲಿ ಆಸ್ಪತ್ರೆ, ಹೋಟೆಲ್, ಅಂಚೆ ಸೇವೆಗಳಿಗೆ ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ.
ಅಂಚೆ ಇಲಾಖೆಯ ಬುಕ್ ಪೋಸ್ಟ್ 10 ಗ್ರಾಂ ಒಳಗಿನ ಲಕೋಟೆಗಳಿಗೆ ಶೇಕಡ 18 ರಷ್ಟು ತೆರಿಗೆ ಹಾಕಲಾಗುವುದು. ಚೆಕ್ ಬುಕ್ ಗಳಿಗೆ ಶೇಕಡ 18ರಷ್ಟು ತೆರಿಗೆ ವಿಧಿಸಲು ಜಿಎಸ್ಟಿ ಮಂಡಳಿ ಅನುಮತಿ ನೀಡಿದೆ. 1000 ರೂ.ಒಳಗೆ ಬಾಡಿಗೆ ಹೊಂದಿರುವ ಹೋಟೆಲ್ ರೂಮ್ ಗಳಿಗೆ ಶೇಕಡ 12 ರಷ್ಟು ತೆರಿಗೆ ಹಾಕಲಾಗುವುದು. 5000 ರೂ.ಮೇಲ್ಪಟ್ಟ ಐಸಿಯೇತರ ಆಸ್ಪತ್ರೆ ಕೊಠಡಿಗಳಿಗೆ ಶೇಕಡ 5 ರಷ್ಟು ತೆರಿಗೆ ವಿಧಿಸಲು ಜಿಎಸ್ಟಿ ಮಂಡಳಿ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಹಣಕಾಸು ಸಚಿವರ ಸಮಿತಿ ಮಾಡಿದ್ದ ಶಿಫಾರಸನ್ನು ಕೇಂದ್ರೀಯ ಜಿಎಸ್ಟಿ ಮಂಡಳಿ ಅನುಮೋದಿಸಿದೆ.
ಉದ್ಯಮ ಸಮೂಹಗಳು ವಸತಿ ಕಟ್ಟಡಗಳನ್ನು ಬಾಡಿಗೆಗೆ ನೀಡಿದ್ದರೆ ಅವುಗಳಿಗೆ ನೀಡಲಾಗಿದ್ದ ತೆರಿಗೆವಿನಾಯಿತಿ ರದ್ದು ಮಾಡಲಾಗುತ್ತದೆ.
ಎರಡು ಲಕ್ಷ ರೂಪಾಯಿಗಿಂತ ಹೆಚ್ಚು ಮೊತ್ತದ ಚಿನ್ನಾಭರಣ, ಅಮೂಲ್ಯ ಲೋಹಗಳನ್ನು ಅಂತರರಾಜ್ಯ ಸಾಗಣೆ ವೇಳೆ ಇ –ವೇ ಬಿಲ್ ಕಡ್ಡಾಯವಾಗಿರುತ್ತದೆ.
ಪ್ಯಾಕ್ ಮಾಡಿದ ಮಾಂಸ, ಮೀನು, ಮೊಸರು, ಪನ್ನೀರ್, ಜೇನುತುಪ್ಪ, ಬೆಲ್ಲ, ಒಣಗಿಸಿದ ತರಕಾರಿ, ಗೋಧಿ ಇತರ ಧಾನ್ಯಗಳು, ಮಂಡಕ್ಕಿ, ಸಾವಯವ ಗೊಬ್ಬರಗಳಿಗೆ ಶೇಕಡ 5 ರಷ್ಟು ತೆರಿಗೆ ಹಾಕಲಾಗುತ್ತದೆ ಎಂದು ಹೇಳಲಾಗಿದೆ.