ನವದೆಹಲಿ: 42 ನೇ ಜಿ.ಎಸ್.ಟಿ. ಕೌನ್ಸಿಲ್ ಸಭೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರು ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಜಿ.ಎಸ್.ಟಿ. ಪರಿಹಾರವನ್ನು 2022 ನಂತರವೂ ವಿಸ್ತರಿಸಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ. 5 ವರ್ಷಗಳ ಅವಧಿಗೆ ಮೀರಿ ಜಿ.ಎಸ್.ಟಿ. ಪರಿಹಾರ ವಿಸ್ತರಿಸಬೇಕೆಂಬ ಕುರಿತಾಗಿ ಚರ್ಚೆ ನಡೆದು ಅಗತ್ಯವಿರುವ ಅವಧಿಗೆ ಹೆಚ್ಚಿನ ವಿವರ ರೂಪಿಸಲು ತೀರ್ಮಾನಿಸಲಾಗಿದೆ.
2020 -21 ರ ಅವಧಿಯಲ್ಲಿ ಆದಾಯ ನಷ್ಟಕ್ಕೆ ಕೇಂದ್ರ ಸರ್ಕಾರ ರಾಜ್ಯಗಳಿಗೆ 20 ಸಾವಿರ ಕೋಟಿ ರೂಪಾಯಿ ಪರಿಹಾರವನ್ನು ಮುಂದಿನ ವಾರದ ಒಳಗೆ ಬಿಡುಗಡೆ ಮಾಡಲಿದೆ. 2017 -18 ರ IGST ಸುಮಾರು 25 ಸಾವಿರ ಕೋಟಿ ರೂಪಾಯಿ ಪರಿಹಾರವನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ.
ಜಿ.ಎಸ್.ಟಿ. ಸೆಸ್ ಅನ್ನು 2024ರವರೆಗೆ ವಿಸ್ತರಿಸುವ ಪ್ರಸ್ತಾಪವಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಲಾಗುವುದು ಹೇಳಲಾಗಿದೆ.
ಸೆಸ್ ವಸೂಲಿ ಮಾಡುವ ಸಮಯವನ್ನು ನಿಗದಿಪಡಿಸಲಾಗಿಲ್ಲವಾದರೂ, ಅದನ್ನು 2022 ಮೀರಿ 2 ವರ್ಷಗಳಿಗೆ ವಿಸ್ತರಿಸಬಹುದು. ಸರಿದೂಗಿಸುವ ತೆರಿಗೆ ವಿಧಿಸುವ ಪ್ರಸ್ತಾಪಕ್ಕೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಮಂಡಳಿ ಸೋಮವಾರ ಅನುಮೋದನೆ ನೀಡಿದೆ ಎಂದು ಹೇಳಲಾಗಿದೆ.
ಇನ್ನು ಜಿ.ಎಸ್.ಟಿ. ಪರಿಹಾರದ ಬದಲಿಗೆ ಸಾಲ ಮಾಡಿ ಎನ್ನುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಬಿಜೆಪಿಯೇತರ ರಾಜ್ಯ ಸರ್ಕಾರಗಳು ತೀವ್ರವಾಗಿ ವಿರೋಧಿಸಿವೆ ಎನ್ನಲಾಗಿದೆ.