ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಮೇ ತಿಂಗಳ ಆದಾಯ ಸಂಗ್ರಹ ಏಪ್ರಿಲ್ ಗಿಂತ ಕುಸಿತ ಕಂಡಿದೆ. ಎಪ್ರಿಲ್ ತಿಂಗಳಲ್ಲಿ ದಾಖಲೆಯ 1.41 ಲಕ್ಷ ಕೋಟಿ ರೂಪಾಯಿ ಜಿಎಸ್ಟಿ ಸಂಗ್ರಹವಾಗಿತ್ತು.
ಮೇ ತಿಂಗಳಲ್ಲಿ 1.02 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಏಪ್ರಿಲ್ ಗಿಂತ ಕಡಿಮೆ ಆಗಿದೆ. ಆದರೆ, ಕಳೆದ ವರ್ಷದ ಅವಧಿಗೆ ಹೋಲಿಸಿದರೆ ಆದಾಯ ಶೇಕಡ 65 ರಷ್ಟು ಹೆಚ್ಚಾಗಿದೆ. ಜಿಎಸ್ಟಿ ಆದಾಯ ಒಂದು ಲಕ್ಷ ಕೋಟಿ ರೂಪಾಯಿಯನ್ನು ದಾಟಿರುವುದು ಸತತ ಎಂಟನೇ ತಿಂಗಳಾಗಿದೆ.
ಕೊರೋನಾ ಸಾಂಕ್ರಾಮಿಕ ರೋಗದ ಕಾರಣ ಹೆಚ್ಚಿನ ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿ ಮಾಡಲಾಗಿತ್ತು. ಮೇ ತಿಂಗಳಲ್ಲಿ ಸರಕುಗಳ ಆಮದಿನಿಂದ ಬರುವ ಆದಾಯ ಶೇಕಡ 56 ರಷ್ಟು ಜಾಸ್ತಿಯಾಗಿದೆ. ದೇಶಿಯ ವಹಿವಾಟಿನ ಆದಾಯ ಕಳೆದ ವರ್ಷ ಇದೇ ತಿಂಗಳಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ ಶೇಕಡ 69 ರಷ್ಟು ಜಾಸ್ತಿಯಾಗಿದೆ.
ಮೇ ತಿಂಗಳಲ್ಲಿ ಒಟ್ಟು 1,02,709 ಕೋಟಿ ರೂ. ಸಂಗ್ರಹವಾಗಿದೆ. ಇದರಲ್ಲಿ ಸಿಜಿಎಸ್‌ಟಿ 17,592 ಕೋಟಿ ರೂ., ಎಸ್‌ಜಿಎಸ್‌ಟಿ 22,653 ರೂ., ಐಜಿಎಸ್‌ಟಿ 53,199 ಕೋಟಿ ರೂ.(ಸರಕುಗಳ ಆಮದಿನಲ್ಲಿ ಸಂಗ್ರಹಿಸಿದ 26,002 ಕೋಟಿ ರೂ.), ಸೆಸ್ 9265 ಕೋಟಿ ರೂ.(ಸರಕುಗಳ ಆಮದುಗಾಗಿ ಸಂಗ್ರಹಿಸಿದ 868 ಕೋಟಿ ರೂ.) ಆಗಿದೆ ಎಂದು ಶನಿವಾರ ಬಿಡುಗಡೆ ಮಾಡಿದ ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.