ನವದೆಹಲಿ: ಗ್ರಾಮ ಉಜಾಲ ಯೋಜನೆಯಡಿ ಕೇಂದ್ರ ಸರ್ಕಾರ ಕೇವಲ 10 ರೂ.ಗೆ ಎಲ್ಇಡಿ ಬಲ್ಬ್ ನೀಡುತ್ತಿದೆ. ಇದುವರೆಗೆ 50 ಲಕ್ಷಕ್ಕೂ ಹೆಚ್ಚು ಎಲ್ಇಡಿ ಬಲ್ಬ್ ಗಳನ್ನು ವಿತರಿಸಲಾಗಿದೆ. ಸರ್ಕಾರಿ ಕಂಪನಿ ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ -CESL ಗ್ರಾಮ ಉಜಾಲಾ ಯೋಜನೆ ಅಡಿಯಲ್ಲಿ 50 ಲಕ್ಷ ಎಲ್ಇಡಿ ಬಲ್ಬ್ ಗಳನ್ನು ವಿತರಿಸುವ ಮಹತ್ವದ ಸಾಧನೆ ಸಾಧಿಸಿದೆ.
ಎನರ್ಜಿ ಎಫಿಷಿಯನ್ಸಿ ಸರ್ವೀಸಸ್ ಲಿಮಿಟೆಡ್‌ನ(ಇಇಎಸ್‌ಎಲ್) ಅಂಗ ಸಂಸ್ಥೆಯಾದ ಸಿಇಎಸ್‌ಎಲ್ ಈ ಸಾಧನೆ ಮಾಡಿದೆ ಎಂದು ವಿದ್ಯುತ್ ಸಚಿವಾಲಯ ತಿಳಿಸಿದೆ. ಗ್ರಾಮ ಉಜಾಲ ಯೋಜನೆಯನ್ನು ಬಿಹಾರ, ಉತ್ತರ ಪ್ರದೇಶ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣದ ಗ್ರಾಮೀಣ ಮನೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಉತ್ತಮ ಪ್ರತಿಕ್ರಿಯೆ
ಗ್ರಾಮೀಣ ಪ್ರದೇಶದಲ್ಲಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. CESL ಈ ವರ್ಷದ ಮಾರ್ಚ್‌ನಲ್ಲಿ ಹಳ್ಳಿಗಳಲ್ಲಿ ಎಲ್‌ಇಡಿ ಬಲ್ಬ್ ಗಳನ್ನು ಕೈಗೆಟುಕುವ ವೆಚ್ಚದಲ್ಲಿ ಅಂದರೆ 10 ರೂಪಾಯಿಗಳಲ್ಲಿ ವಿತರಿಸಲು ಯೋಜನೆ ಪ್ರಾರಂಭಿಸಿತ್ತು. ಈ ತಿಂಗಳು, ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ, 2021 ರ ಸಂದರ್ಭದಲ್ಲಿ, ಒಂದೇ ದಿನದಲ್ಲಿ 1 ಮಿಲಿಯನ್ ಎಲ್‌ಇಡಿ ಬಲ್ಬ್‌ಗಳನ್ನು ವಿತರಿಸುವ ಪ್ರಮುಖ ಗುರಿಯನ್ನು CESL ಸಾಧಿಸಿದೆ.
ಗ್ರಾಮ ಉಜಾಲಾ ಯೋಜನೆ ಎಂದರೇನು?
CESL ಸಾಂಪ್ರದಾಯಿಕ ಬಲ್ಬ್ ಗಳಿಗೆ ಬದಲಾಗಿ ಪ್ರತಿ ಬಲ್ಬ್ ಗೆ 10 ರೂ. ದರದಲ್ಲಿ 3 ವರ್ಷಗಳ ಗ್ಯಾರಂಟಿಯೊಂದಿಗೆ ಉತ್ತಮ ಗುಣಮಟ್ಟದ 7W ಮತ್ತು 12W LED ಬಲ್ಬ್ ಗಳನ್ನು ಒದಗಿಸುತ್ತಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ಕುಟುಂಬವು ಗರಿಷ್ಠ 5 ಬಲ್ಬ್ ಗಳನ್ನು ಪಡೆಯಬಹುದು.
ವಾರ್ಷಿಕ 250 ಕೋಟಿ ಉಳಿತಾಯವಾಗಲಿದೆ
ಇದರೊಂದಿಗೆ, ಈ ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲಿ ವರ್ಷಕ್ಕೆ 71 ಕೋಟಿಗೂ ಹೆಚ್ಚು ಯೂನಿಟ್ ವಿದ್ಯುತ್ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ವಾರ್ಷಿಕ ಸುಮಾರು 250 ಕೋಟಿ ವೆಚ್ಚದ ರೂಪದಲ್ಲಿ ಉಳಿತಾಯವಾಗಲಿದೆ. ಈ ಕಾರ್ಯಕ್ರಮವು ಮಾರ್ಚ್ 31, 2022 ರವರೆಗೆ ಇರುತ್ತದೆ.
ಸಿಇಎಸ್‌ಎಲ್‌ನ ಎಂಡಿ ಮತ್ತು ಸಿಇಒ ಮಹುವಾ ಆಚಾರ್ಯ, ಗ್ರಾಮೀಣ ಪರಿಸರದ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಯೋಜನೆ ಪೂರ್ಣಗೊಳಿಸಿದ ನಂತರ ಇತರ ರಾಜ್ಯಗಳ ಹಳ್ಳಿಗಳಿಗೆ ಈ ಕಾರ್ಯಕ್ರಮವನ್ನು ವಿಸ್ತರಿಸುತ್ತೇವೆ ಎಂದು ತಿಳಿಸಿದ್ದಾರೆ.